ADVERTISEMENT

ಉತ್ತರ ಕನ್ನಡ: ರಕ್ಷಣೆಗೆ ಮೊರೆಯಿಡುತ್ತಿದೆ ಭದ್ರ ಕೋಟೆ!

ಕುಮಟಾ ತಾಲ್ಲೂಕಿನ ಮಿರ್ಜಾನ್ ಕೋಟೆಯ ಹಿಂಭಾಗದ ಕಲ್ಲುಗಳ ಕುಸಿತ

ಸದಾಶಿವ ಎಂ.ಎಸ್‌.
Published 1 ಜೂನ್ 2022, 4:58 IST
Last Updated 1 ಜೂನ್ 2022, 4:58 IST
ಕುಮಟಾ ತಾಲ್ಲೂಕಿನ ಮಿರ್ಜಾನ್ ಕೋಟೆಯ ಹಿಂಭಾಗದ ಕಲ್ಲುಗಳು ಕುಸಿದಿರುವುದು
ಕುಮಟಾ ತಾಲ್ಲೂಕಿನ ಮಿರ್ಜಾನ್ ಕೋಟೆಯ ಹಿಂಭಾಗದ ಕಲ್ಲುಗಳು ಕುಸಿದಿರುವುದು   

ಕಾರವಾರ: ಜಿಲ್ಲೆಗೆ ಐತಿಹಾಸಿಕವಾಗಿ ಇರುವ ಮಹತ್ವವನ್ನು ಸಾರುವ ತಾಣಗಳಲ್ಲಿ, ಕುಮಟಾ ತಾಲ್ಲೂಕಿನ ಮಿರ್ಜಾನ್ ಕೋಟೆ ಪ್ರಮುಖವಾಗಿದೆ. ಶತಮಾನಗಳ ಹಿಂದೆ ಕರಾವಳಿಯ ಭೂ ಭಾಗದ ಮೇಲೆ ಹಿಡಿತ ಸಾಧಿಸಲು ನಡೆದ ಹಲವಾರು ಯುದ್ಧಗಳಿಗೆ ಅದು ಸಾಕ್ಷಿಯಾಗಿ ನಿಂತಿದೆ. ಆದರೆ, ಈಗ ನಿಧಾನವಾಗಿ ತನ್ನ ಸಂರಕ್ಷಣೆಗಾಗಿ ಮೊರೆಯಿಡುತ್ತಿದೆ.

ಪ್ರವಾಸಿ ತಾಣವಾಗಿಯೂ ಸಾವಿರಾರು ಜನರನ್ನು ಆಕರ್ಷಿಸುವ ಕೋಟೆಯ ಮುಂಭಾಗ ಅಚ್ಚುಕಟ್ಟಾಗಿದೆ. ನಿರ್ವಹಣೆ ಸಮರ್ಪಕವಾಗಿದೆ. ಆದರೆ, ಹಿಂಭಾಗದ ಕಲ್ಲುಗಳು ಕರಗುತ್ತಿವೆ. ಒಂದೊಂದೇ ಕುಸಿಯುತ್ತಿದ್ದು, ಕೋಟೆಯು ಜೀರ್ಣಾವಸ್ಥೆಯತ್ತ ಸಾಗುತ್ತಿರುವ ಕಳವಳ ವ್ಯಕ್ತವಾಗುತ್ತಿದೆ.

ಗಟ್ಟಿಯಾದ ಚಿರೆಕಲ್ಲುಗಳಿಂದ ನಿರ್ಮಿಸಲಾಗಿರುವ ಈ ಕೋಟೆಯು, 11 ಎಕರೆ ಎಂಟು ಗುಂಟೆಗಳಷ್ಟು ವಿಶಾಲವಾಗಿದೆ. ಅಘನಾಶಿನಿ ನದಿಗೆ ಸೇರುವ ಹಳ್ಳವೊಂದು ಇದರ ಸಮೀಪದಲ್ಲಿ ಹರಿಯುತ್ತದೆ. ಸ್ವಲ್ಪ ದೂರದಲ್ಲೇ ಸಮುದ್ರವೂ ಭೋರ್ಗರೆಯುತ್ತದೆ. ಶತಮಾನಗಳಿಂದ ಬಿಸಿಲು, ಮಳೆಗೆ ಮೈಯೊಡ್ಡಿ ನಿಂತಿರುವ ಕೋಟೆವು, ಈಗ ಭಾರತೀಯ ಪುರಾತತ್ವ ಇಲಾಖೆಯ ಅಧೀನದಲ್ಲಿದೆ.

ADVERTISEMENT

‘ಕೋಟೆಯ ಎದುರು ಭಾಗವನ್ನು ಕಾಲಕಾಲಕ್ಕೆ ದುರಸ್ತಿ ಮಾಡಲಾಗುತ್ತಿದೆ. ಭಾರತೀಯ ಪುರಾತತ್ವ ಇಲಾಖೆಯ ಸಿಬ್ಬಂದಿ ಈ ಪ್ರದೇಶವನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ಸ್ವಚ್ಛತೆ, ಪ್ರವಾಸಿಗರಿಗೆ ಸಮಯದ ಪರಿಪಾಲನೆ ಎಲ್ಲವೂ ಸರಿಯಾಗಿದೆ. ಆದರೆ, ಹಿಂಭಾಗದ ಕಲ್ಲುಗಳ ಬಗ್ಗೆ ಗಮನವನ್ನೇ ಹರಿಸಿದಂತಿಲ್ಲ. ಅವು ಒಂದೊಂದೇ ಉದುರುತ್ತಿದ್ದು, ಕೋಟೆಯ ಸುರಕ್ಷತೆಗೆ ಆತಂಕ ಎದುರಾಗಿದೆ’ ಎಂದು ಹೆಸರು ಹೇಳಲು ಬಯಸದ ಸ್ಥಳೀಯರೊಬ್ಬರು ಕಳವಳ ವ್ಯಕ್ತಪಡಿಸಿದರು.

‘ಈ ಕೋಟೆಯಲ್ಲಿ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದಂದು ರಾಷ್ಟ್ರ ಧ್ವಜಾರೋಹಣ ಮಾಡಲಾಗುತ್ತದೆ. ಈ ತಾಣವನ್ನು ಮತ್ತಷ್ಟು ಕಾಲ ಸದೃಢವಾಗಿರುವಂತೆ ನೋಡಿಕೊಳ್ಳಬೇಕು. ಮುಂದಿನ ಪೀಳಿಗೆಗೂ ಇದನ್ನು ಉಳಿಸಿಕೊಂಡು ಇತಿಹಾಸದ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

ಸ್ಪಷ್ಟ ಉಲ್ಲೇಖವಿಲ್ಲ:ದಿಬ್ಬದ ಮೇಲಿರುವ ಮಿರ್ಜಾನ್ ಕೋಟೆಯ ನಿರ್ಮಾಣ ಮಾಡಿದವರು ಯಾರು ಎಂಬ ಬಗ್ಗೆ ಇಂದಿಗೂ ಸ್ಪಷ್ಟವಾದ ಉಲ್ಲೇಖಗಳಿಲ್ಲ. ಭಾರತೀಯ ‍ಪುರಾತತ್ವ ಇಲಾಖೆಯು ಅಳವಡಿಸಿರುವ ಮಾಹಿತಿ ಫಲಕದ ಪ್ರಕಾರ, ಬಿಜಾಪುರ ಆದಿಲ್‌ಶಾಹಿ ಸುಲ್ತಾನರ ಅಧೀನದಲ್ಲಿದ್ದ ಪೋಂಡಾ ಸಾಮಂತ, ಶರೀಫ್ ಉಲ್ ಮುಲ್ಕ್ (1608ರಿಂದ 1640) ಇದನ್ನು ಕಟ್ಟಿಸಿರಬಹುದು ಎಂದು ಅಂದಾಜಿಸಲಾಗಿದೆ.

ವಿಜಯನಗರ ಸಾಮ್ರಾಜ್ಯದ ಪತನದ ನಂತರ, ಕೋಟೆಯು ಬಹಮನಿ ಸುಲ್ತಾನರ, ಬಿಜಾಪುರದ ಆದಿಲ್‌ ಷಾಹಿಯ, ಉತ್ತರ ಕನ್ನಡದ ವಿವಿಧ ಸಣ್ಣ ಅರಸು ಮನೆತನಗಳ, ಹೈದರಾಲಿ, ಟಿಪ್ಪು ಸುಲ್ತಾನನ ಆಡಳಿತಕ್ಕೆ ಒಳಪಟ್ಟಿತ್ತು. ಟಿಪ್ಪುವಿನ ಮರಣಾನಂತರ ಬ್ರಿಟಿಷರು ವಶಪಡಿಸಿಕೊಂಡರು ಎಂದು ಫಲಕದಲ್ಲಿ ಬರೆಯಲಾಗಿದೆ.

ಮತ್ತೊಂದು ವಾದದ ಪ್ರಕಾರ, ಕೋಟೆಯನ್ನು ಗೇರುಸೊಪ್ಪ ರಾಜ್ಯದ ರಾಣಿ ಚೆನ್ನಭೈರಾದೇವಿ 16ನೇ ಶತಮಾನದಲ್ಲಿ ನಿರ್ಮಿಸಿದ್ದಾಗಿ ನಂಬಲಾಗಿದೆ. ಇದೇ ಕೋಟೆಯ ಮೂಲಕ ಕಾಳು ಮೆಣಸು, ಅಡಿಕೆ ಮುಂತಾದ ಉತ್ಪನ್ನಗಳನ್ನು ದೇಶ, ವಿದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು ಎಂದೂ ಹೇಳಲಾಗುತ್ತದೆ.

*
ಮಿರ್ಜಾನ್ ಕೋಟೆಯ ಹಿಂಭಾಗದಲ್ಲಿ ಕಲ್ಲುಗಳು ನೈಸರ್ಗಿಕವಾಗಿ ಕುಸಿದಿರುವ ವಿಚಾರ ಗಮನಕ್ಕೆ ಬಂದಿದೆ. ಶೀಘ್ರವೇ ಯೋಜನಾ ವರದಿ ಸಿದ್ಧಪಡಿಸಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
- ಭರತ್ ರಾಜ್, ಸಂರಕ್ಷಣೆ ಸಹಾಯಕ, ಭಾರತೀಯ ಪುರಾತತ್ವ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.