
ಗೋಕರ್ಣ: ಇಲ್ಲಿನ ಕಡಲತೀರದಲ್ಲಿ ನಿರ್ಮಿಸಿರುವ ಮೀನು ಮಾರುಕಟ್ಟೆ ಕಟ್ಟಡಕ್ಕೆ ಮೀನು ಮಾರಾಟಗಾರರು ಮುಂದಿನ 15 ದಿನದೊಳಗೆ ಸ್ಥಳಾಂತರಗೊಳ್ಳುವಂತೆ ಕ್ರಮವಹಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಮೀನು ಮಾರುಕಟ್ಟೆ ಸ್ಥಳಾಂತರದ ಕುರಿತು ನಡೆದ ವಿಶೇಷ ಸಭೆಯಲ್ಲಿ ಅವರು ಸೂಚನೆ ನೀಡಿದರು.
ಮೀನುಗಾರರು ಕಡಲತೀರದಲ್ಲಿರುವ ಮೀನು ಮಾರುಕಟ್ಟೆಗೆ ಸ್ಥಳಾಂತರಗೊಳ್ಳಲು ಒಪ್ಪದೇ, ತಮ್ಮ ಸಮಸ್ಯೆಯನ್ನು ಸಭೆಯ ಮುಂದೆ ಇಟ್ಟರು. ಅಲ್ಲಿ ಯಾವುದೇ ಮೂಲ ವ್ಯವಸ್ಥೆಯಿಲ್ಲ. ಜನರಿಗೂ ಮೀನು ಖರೀದಿಸಲು ದೂರವಾಗುತ್ತದೆ ಎಂಬ ಕಾರಣಗಳನ್ನು ಹೇಳಿದರು.
ಆದರೆ, ಅದಕ್ಕೆ ಒಪ್ಪದ ಸಭೆಯಲ್ಲಿದ್ದ ಶಾಸಕರು ಹೊಸ ಮೀನು ಮಾರುಕಟ್ಟೆಗೆ ಕೂಡಲೇ ಸ್ಥಳಂತರಗೊಳ್ಳುವಂತೆ ಮೀನುಗಾರರ ಮನವೊಲಿಸಿದರು.
ರಸ್ತೆ ಬದಿಯಲ್ಲಿ ಮೀನು ಮಾರಾಟ ನಡೆಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧವಿದ್ದ ಹಿನ್ನೆಲೆಯಲ್ಲಿ ಶಾಸಕರ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಲಾಯಿತು.
‘ಮುಖ್ಯ ಕಡಲತೀರಕ್ಕೆ ಸಂಪರ್ಕಿಸುವ ರಸ್ತೆ ಮೀನು ಮಾರುಕಟ್ಟೆ ರಸ್ತೆ ಎಂದೇ ಪ್ರಸಿದ್ದಿ ಪಡೆದಿದೆ. ವಾತಾವರಣ ಮೀನು ಮಾರಾಟಗಾರರಿಗೆ ಮತ್ತು ಮೀನು ಕೊಳ್ಳುವವರಿಗೆ ಅನುಕೂಲವಾಗಿಲ್ಲದಿದ್ದರೂ ಸ್ಥಳಾಂತರಗೊಳ್ಳಲು ಮೀನುಗಾರರು ಒಪ್ಪುತ್ತಿರಲಿಲ್ಲ. ಅದೇ ರಸ್ತೆ ಸಮುದ್ರಕ್ಕೂ ಕೂಡುವ ರಸ್ತೆಯಾಗಿದ್ದರಿಂದ ಯಾವಾಗಲೂ ಒತ್ತಡದಿಂದಲೇ ತುಂಬಿರುತ್ತದೆ. ಇದರಿಂದ ಅನೇಕ ಸಲ ಟ್ರಾಫಿಕ್ ಸಮಸ್ಯೆಯಾಗಿ ವಾಹನ ಸವಾರರು ಪರದಾಡಿದ್ದ ಉದಾಹರಣೆಗಳಿವೆ. ಹೊಲಸು ಗಬ್ಬು ನಾರುವ ಪ್ರದೇಶದಲ್ಲಿ ಮೀನು ಮಾರುವುದು ಸಮಂಜಸವಲ್ಲ’ ಎಂದು ಸಾರ್ವಜನಿಕರು ದೂರಿದ್ದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಪಿ.ಶ್ರವಣಕುಮಾರ್, ತಹಶೀಲ್ದಾರ್ ಶ್ರಿಕೃಷ್ಣ ಕಾಮ್ಕರ್, ತಾಲ್ಲೂಕು ಪಂಚಾಯಿತಿ ಇಒ ರಾಜೇಂದ್ರ ಭಟ್, ಗೋಕರ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ, ಸದಸ್ಯರು, ಮೀನುಗಾರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.