ADVERTISEMENT

ಶಿರಸಿ: ಪೊಲೀಸ್ ಪ್ರಕರಣ ಹಿಂಪಡೆಯಲು ಒತ್ತಾಯ

ಸಂಸದರ ನೇತೃತ್ವದಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿದ ಶಾಸಕರು

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 15:17 IST
Last Updated 6 ಜನವರಿ 2020, 15:17 IST
ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು
ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು   

ಶಿರಸಿ: ಜಿಲ್ಲೆ ಶಾಸಕರು ಹಾಗೂ ಬಿಜೆಪಿ ಪ್ರಮುಖರು ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸೋಮವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ, ವಿವಿಧ ಸಮಸ್ಯೆಗಳನ್ನು ಚರ್ಚಿಸಿದರು.

ಹೊನ್ನಾವರ ತಾಲ್ಲೂಕಿನ ಪರೇಶ ಮೇಸ್ತ ಪ್ರಕರಣ ಸಾವಿನ ಪ್ರಕರಣದ ಸಂಬಂಧ ಶಿರಸಿ, ಹೊನ್ನಾವರ, ಕುಮಟಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಮಾಯಕ ಸಾರ್ವಜನಿಕರ ಮೇಲೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣ ಹಿಂಪಡೆಯಬೇಕು ಎಂದು ವಿನಂತಿಸಲಾಯಿತು.

ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರವಾರದಲ್ಲಿ ಕರ್ನಾಟಕ ಜಲ ಸಾರಿಗೆ ಮಂಡಳಿ (Karnataka Maritime Board) ಸ್ಥಾಪಿಸಿದ್ದಕ್ಕೆ ಸಂಸದರು, ಮುಖ್ಯಮಂತ್ರಿಗೆ ಧನ್ಯವಾದ ಹೇಳಿದರು. ಜಿಲ್ಲೆಯ ಮೀನುಗಾರಿಕೆ ಹಾಗೂ ಆರ್ಥಿಕ ಬಂದರುಗಳನ್ನು ವೈಜ್ಞಾನಿಕವಾಗಿ, ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ರಾಜ್ಯ ಸರ್ಕಾರದಿಂದ ಅಭಿವೃದ್ಧಿಗೊಳಿಸಲು ಸೂಕ್ತ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಬೇಕು. ತಾಳಗುಪ್ಪ-ಸಿದ್ದಾಪುರ ರೈಲ್ವೆ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಆದ್ಯತೆ ಮೇರೆಗೆ ತ್ವರಿತವಾಗಿ ಕಾರ್ಯಾನ್ವಯಗೊಳಿಸಬೇಕು. ಕೆಲವು ಆಸಕ್ತ ವಿದೇಶಿ ಕಂಪನಿಗಳು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಕುರಿತು ಆಸಕ್ತಿ ತೋರಿದ್ದು, ಅವರೊಂದಿಗೆ ಕೈಜೋಡಿಸಿ ಜಿಲ್ಲೆಯ ಹಾಗೂ ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಸೂಕ್ತ ನೀತಿ–ನಿಯಮಗಳನ್ನು ರೂಪಿಸಿಬೇಕು.ಗೋಕರ್ಣ ಸಮಗ್ರ ಅಭಿವೃದ್ಧಿಗಾಗಿ ಗೋಕರ್ಣ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಬೇಕು ಎಂದು ಮುಖ್ಯಮಂತ್ರಿಯನ್ನು ಕೋರಲಾಯಿತು.

ADVERTISEMENT

ಕಾರವಾರ ಮಾಜಾಳಿಯಿಂದ ಭಟ್ಕಳ ತಾಲ್ಲೂಕಿನ ಬೆಳಕೆಯವರೆಗೆ ರಾಷ್ಟ್ರೀಯ ಹೆದ್ದಾರಿ ನಂ.66 ಹಾದು ಹೋಗುತ್ತದೆ. ಕೆಲವು ಪ್ರದೇಶಗಳಲ್ಲಿ ರಸ್ತೆಯು ತುಂಬ ಇಕ್ಕಟ್ಟಾಗಿದ್ದು, ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಾಣವಾಗಿದೆ. ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಕ್ಕೀಡಾಗುತ್ತಿವೆ.
ಅಗತ್ಯವಿರುವ ಕಡೆಗಳಲ್ಲಿ 45 ಮೀಟರ್ ಅಗಲದ ಹೆದ್ದಾರಿ ಹಾಗೂ ಉಪ ರಸ್ತೆ ನಿರ್ಮಾಣ ಹಾಗೂ ಅಪಘಾತಗಳನ್ನು ತಡೆಯುವ ದೃಷ್ಟಿಯಿಂದ ವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಾಣಕ್ಕೆ ಸೂಚಿಸಬೇಕು ಎಂದು ಸಹ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ದಿನಕರ ಶೆಟ್ಟಿ, ಶಿವರಾಮ ಹೆಬ್ಬಾರ್, ಸುನಿಲ ನಾಯ್ಕ, ರೂಪಾಲಿ ನಾಯ್ಕ, ಮಾಜಿ ಶಾಸಕರಾದ ಸುನಿಲ ಹೆಗೆಡೆ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ಪ್ರಧಾನ ಕಾರ್ಯದರ್ಶಿಗಳಾದ ಎನ್.ಎಸ್.ಹೆಗಡೆ, ಕೃಷ್ಣ ಎಸಳೆ, ವೆಂಕಟೇಶ ನಾಯಕ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.