ADVERTISEMENT

ಇಂಗ್ಲಿಷ್ ಮಾಧ್ಯಮ ವ್ಯಾಮೋಹ ಬೇಡ; ಸಭಾಪತಿ ಬಸವರಾಜ ಹೊರಟ್ಟಿ

ಸಂವಾದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 14:15 IST
Last Updated 26 ಆಗಸ್ಟ್ 2021, 14:15 IST
ಶಿರಸಿಯ ಲಯನ್ಸ್ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಶಿರಸಿ ತಾಲ್ಲೂಕು ಘಟಕದವರು ವಿಧಾನ ಪರಿಷತ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಿದರು
ಶಿರಸಿಯ ಲಯನ್ಸ್ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಶಿರಸಿ ತಾಲ್ಲೂಕು ಘಟಕದವರು ವಿಧಾನ ಪರಿಷತ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಿದರು   

ಶಿರಸಿ:ಇಂಗ್ಲಿಷ್‌ ಮಾಧ್ಯಮ ವ್ಯಾಸಂಗದ ಮೋಹದಿಂದ ಪಾಲಕರು ಹೊರಬರಬೇಕು. ಮಾತೃಭಾಷೆ, ಮಕ್ಕಳಿಗೆ ಅನುಕೂಲವಾಗುವ ಭಾಷೆಯ ಶಿಕ್ಷಣ ಕೊಡಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ನಗರದ ಲಯನ್ಸ್ ಪ್ರೌಢಶಾಲೆಯಲ್ಲಿ ಗುರುವಾರ ಮಾಧ್ಯಮಿಕ ಶಾಲಾ ನೌಕರರ ಸಂಘದ ತಾಲ್ಲೂಕು ಘಟಕ ಆಯೋಜಿಸಿದ್ದ ‘ಹೊಸ ಶಿಕ್ಷಣ ನೀತಿ ಮತ್ತು ಖಾಸಗಿ ಶಾಲೆ ಶಿಕ್ಷಕರು ಎದುರಿಸುತ್ತಿರುವ ಸವಾಲು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪ್ರಾಯೋಗಿಕ ಚಿಂತನೆ ನಡೆಯುತ್ತಿಲ್ಲ. ಅವರನ್ನು ಒತ್ತಡಕ್ಕೆ ಸಿಲುಕಿಸುವ ಭಾಷೆಯಲ್ಲಿ ಕಲಿಕೆಗೆ ಪ್ರೇರೇಪಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಹಿಂದಿನ ಕಾಲದಲ್ಲಿ ಶಿಕ್ಷಣದ ಬಗ್ಗೆ ಜ್ಞಾನ ಹೊಂದಿದ್ದ ಅಧಿಕಾರಿಗಳಿದ್ದರು. ಈಗ ಶಿಕ್ಷಣ ಇಲಾಖೆಯ ಬಹುತೇಕ ಅಧಿಕಾರಿಗಳು ತಜ್ಞರಲ್ಲ. ಕೆಲಸದ ಒತ್ತಡದಲ್ಲಿರುವ ಕಾರಣ ಶಿಕ್ಷಕರಿಗೂ ಉತ್ತಮ ಶಿಕ್ಷಣ ನೀಡುವುದು ಸವಾಲಾಗಿದೆ ಎಂದರು.

ADVERTISEMENT

ಖಾಸಗಿ ಶಾಲೆ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂವಾದದಲ್ಲಿ ಹಲವು ಶಿಕ್ಷಕರು ಗಮನಸೆಳೆದರು. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರಿಸುವ ಭರವಸೆಯನ್ನು ಹೊರಟ್ಟಿ ನೀಡಿದರು.

ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ವಿ.ಜಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಭಟ್ಟ, ಪ್ರಕಾಶ ನಾಯ್ಕ, ಪ್ರಭಾಕರ ಬಂಟ್, ಲಂಬೋದರ ಹೆಗಡೆ, ನಾರಾಯಣ ದೈಮನೆ, ನಾಗರಾಜ ನಾಯ್ಕ, ದಿನೇಶ ನೇತ್ರೆಕರ್ ಇದ್ದರು.
ಶಶಾಂಕ ಹೆಗಡೆ ಹೊಸ ಶಿಕ್ಷಣ ನೀತಿ ಕುರಿತು ಮಾಹಿತಿ ನೀಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಜಿ.ವಿ.ಹೆಗಡೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.