ADVERTISEMENT

ಶಿರಸಿ: ಮಾಜಿ ಸಂಸದರ ಪತ್ನಿಯ ಸರ ಕಿತ್ತುಕೊಂಡು ಪರಾರಿಯಾದ ಕಳ್ಳ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 11:19 IST
Last Updated 6 ಸೆಪ್ಟೆಂಬರ್ 2023, 11:19 IST
   

ಶಿರಸಿ: ಮಾಜಿ ಸಂಸದ ದೇವರಾಯ ನಾಯ್ಕ ಅವರ ಮನೆಗೆ ಅಪರಿಚಿತ ವ್ಯಕ್ತಿ ನೀರು ಕೇಳಲು ಬಂದು ಬಂಗಾರದ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಬುಧವಾರ ನಡೆದಿದೆ.

ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ದೇವರಾಯ ನಾಯ್ಕ ಅವರ ಮನೆಯಲ್ಲಿ ಈ ಪ್ರಕರಣ ನಡೆದಿದೆ. ನಗರದ ಯಲ್ಲಾಪುರ ನಾಕಾದಲ್ಲಿರುವ ಮಾಜಿ ಸಂಸದರ ಮನೆಯಲ್ಲಿ ಅವರ ಪತ್ನಿ ಗೀತಾ ನಾಯ್ಕ ಒಬ್ಬರೇ ಇದ್ದಾಗ ಅಪರಿಚಿತ ವ್ಯಕ್ತಿ ಒಬ್ಬ ನೀರು ಕೇಳುವ ನೆಪ ಮಾಡಿಕೊಂಡು ಬಂದು ಅವರ ಕುತ್ತಿಗೆಯಲ್ಲಿ ಸರವನ್ನು ಹರಿದುಕೊಂಡು ಹೋಗಿದ್ದಾನೆ.‌

ಅಂದಾಜು ₹3 ಲಕ್ಷ ಮೌಲ್ಯದ 60 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಘಟನಾ ಸಮಯದಲ್ಲಿ ಮಾಜಿ ಸಂಸದರ ಪತ್ನಿ ಹೊರತು ಪಡಿಸಿ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ‌. ವಿಷಯ ತಿಳಿದ ನಂತರ ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಮಗ ನಾಗರಾಜ ನಾಯ್ಕ ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.‌

ADVERTISEMENT

ಸ್ಥಳಕ್ಕೆ ಮಾರುಕಟ್ಟೆ ಠಾಣೆ ಪೊಲೀಸರು ಭೇಟಿ ನೀಡಿದ್ದು, ಆರೋಪಿಯನ್ನು ಹಿಡಿಯಲು ನಾಕಾಬಂದಿ ಸೇರಿದಂತೆ ವಿವಿಧ ತುರ್ತು ಕ್ರಮ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.