ADVERTISEMENT

ಕಾರವಾರ: ಕೊರತೆ ನಡುವೆಯೂ ತಗ್ಗಿದ ಮರಣ ಪ್ರಮಾಣ

ದೇಶ, ರಾಜ್ಯದ ಸರಾಸರಿ ಪ್ರಮಾಣಕ್ಕಿಂತಲೂ ಜಿಲ್ಲೆಯಲ್ಲಿ ತಾಯಿ–ಶಿಶು ಸಾವು ಕಡಿಮೆ

ಗಣಪತಿ ಹೆಗಡೆ
Published 14 ಮಾರ್ಚ್ 2025, 6:50 IST
Last Updated 14 ಮಾರ್ಚ್ 2025, 6:50 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕಾರವಾರ: ಆರೋಗ್ಯ ಸೌಕರ್ಯಗಳ ವಿಚಾರದಲ್ಲಿ ಹಿಂದುಳಿದಿದೆ ಎಂಬ ಹಣೆಪಟ್ಟಿ ಹೊತ್ತಿರುವ ಉತ್ತರ ಕನ್ನಡದಲ್ಲಿ ವೈದ್ಯರ ಕೊರತೆ, ಸೀಮಿತ ಸೌಲಭ್ಯಗಳ ನಡುವೆಯೂ ತಾಯಿ ಮತ್ತು ಶಿಶು ಮರಣ ಪ್ರಮಾಣ ಇಳಿಕೆಯಾಗುತ್ತಿರುವುದು ತುಸು ನೆಮ್ಮದಿ ತರಿಸಿದೆ.

ಜಿಲ್ಲೆಯಲ್ಲಿ ಜನನವಾಗುವ ಪ್ರತಿ ಸಾವಿರ ಶಿಶುಗಳ ಪೈಕಿ ಬೇರೆ ಬೇರೆ ಕಾರಣಗಳಿಂದ ಅವು ಮೃತಪಡುವ ಪ್ರಮಾಣ ಶೇ.6.54ರಷ್ಟಿದೆ. ಪ್ರತಿ ಒಂದು ಲಕ್ಷ ಹೆರಿಗೆಗೆ ಶೇ.47.87 ರಷ್ಟು ಬಾಣಂತಿಯರು ಮರಣಕ್ಕೆ ತುತ್ತಾಗುತ್ತಿದ್ದಾರೆ. ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಪ್ರಮಾಣ ತೀರಾ ಇಳಿಕೆಯಾಗಿದೆ ಎಂಬುದಾಗಿ ಆರೋಗ್ಯ ಇಲಾಖೆ ಹೇಳುತ್ತಿದೆ.

ADVERTISEMENT

ಗುಡ್ಡಗಾಡು ಪ್ರದೇಶವನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ತೀರಾ ಈಚಿನ ವರ್ಷಗಳವರೆಗೂ ಮನೆಯಲ್ಲೇ ಹೆರಿಗೆ ಮಾಡಿಸುವ ನೂರಾರು ಪ್ರಕರಣಗಳು ಪ್ರತಿ ವರ್ಷ ಬೆಳಕಿಗೆ ಬರುತ್ತಿದ್ದವು. ಆದರೆ, ಈಗ ಅವುಗಳ ಪ್ರಮಾಣ ಕಡಿಮೆಯಾಗಿದೆ. 2024–25ನೇ ಸಾಲಿನಲ್ಲಿ 14,623 ಹೆರಿಗೆಗಳು ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ನಡೆದಿವೆ. ಅವುಗಳ ಪೈಕಿ 96 ಶಿಶುಗಳು ಮೃತಪಟ್ಟಿದ್ದರೆ, 7 ಮಂದಿ ತಾಯಂದಿರು ಹೆರಿಗೆ ಸಮಯದಲ್ಲೇ ಅಸುನೀಗಿದ್ದಾರೆ.

‘ತಾಯಂದಿರು ಮೃತಪಟ್ಟ ಏಳು ಪ್ರಕರಣಗಳಲ್ಲಿ ಕೆಲವರಿಗೆ ಆರೋಗ್ಯ ಸಮಸ್ಯೆ ಕಾಡಿದ್ದು ಪ್ರಮುಖ ಕಾರಣವಾಗಿದ್ದರೆ, ಮೂರು ಪ್ರಕರಣಗಳಲ್ಲಿ ವೈದ್ಯ ಸಿಬ್ಬಂದಿಯ ನಿರ್ಲಕ್ಷತನದಿಂದ ಸಾವು ಸಂಭವಿಸಿದೆ. ಈ ಬಗ್ಗೆ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮವಾಗಿದೆ. ಶಿಶುಗಳ ಮರಣಕ್ಕೆ ಅವಧಿಪೂರ್ವ ಜನನ, ಕಡಿಮೆ ತೂಕ, ಪೌಷ್ಟಿಕತೆಯ ಕೊರತೆ ಮತ್ತು ನ್ಯುಮೋನಿಯಾ ಸಮಸ್ಯೆಗಳು ಕಾರಣವಾಗಿದ್ದವು’ ಎಂದು ಆರೋಗ್ಯ ಇಲಾಖೆಯ ಮಕ್ಕಳ ಆರೋಗ್ಯ ಅಧಿಕಾರಿ (ಆರ್‌ಸಿಎಚ್‌ಒ) ಡಾ.ಕೆ.ನಟರಾಜ್ ತಿಳಿಸಿದರು.

‘ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ಪ್ರಥಮ ತ್ರೈಮಾಸಿಕದಲ್ಲೇ ಗರ್ಭಿಣಿಯರ ಹೆಸರು ನೋಂದಾಯಿಸಲಾಗುತ್ತಿದೆ. 12 ರಿಂದ 14 ಬಾರಿ ಅವರನ್ನು ನಿಯಮಿತ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆರಂಭಿಕ ಹಂತದಲ್ಲೇ ಅನೀಮಿಯಾ, ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ ಸೇರಿದಂತೆ ಆರೋಗ್ಯ ಸಮಸ್ಯೆ ಗುರುತಿಸಿ, ಚಿಕಿತ್ಸೆ ಒದಗಿಸಲಾಗುತ್ತಿದೆ. ಇದರಿಂದ ಮರಣ ಪ್ರಮಾಣ ತಗ್ಗಿಸಲು ನೆರವಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.