ADVERTISEMENT

ವರ್ಷದೊಳಗೆ ಮನೆ ನಿರ್ಮಿಸದಿದ್ದರೆ ರದ್ದು :ಸಂಸದ ಅನಂತಕುಮಾರ ಹೆಗಡೆ

: ಸೂರು ಕಟ್ಟಿಕೊಳ್ಳದವರ ವಿರುದ್ಧ ಕ್ರಮಕ್ಕೆ ಸಂಸದರ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 13:36 IST
Last Updated 27 ಡಿಸೆಂಬರ್ 2019, 13:36 IST
ಕಾರವಾರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ‘ದಿಶಾ’ ಸಭೆಯಲ್ಲಿ ಸಂಸದ ಅನಂತಕುಮಾರ ಹೆಗಡೆ ಮಾತನಾಡಿದರು. ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿ‍.ಪ.ಸಿಇಒ ಮೊಹಮ್ಮದ್ ರೋಶನ್, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಚಿತ್ರದಲ್ಲಿದ್ದಾರೆ.
ಕಾರವಾರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ‘ದಿಶಾ’ ಸಭೆಯಲ್ಲಿ ಸಂಸದ ಅನಂತಕುಮಾರ ಹೆಗಡೆ ಮಾತನಾಡಿದರು. ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿ‍.ಪ.ಸಿಇಒ ಮೊಹಮ್ಮದ್ ರೋಶನ್, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಚಿತ್ರದಲ್ಲಿದ್ದಾರೆ.   

ಕಾರವಾರ: ‘ಇಂದಿರಾ ಆವಾಸ್ ಯೋಜನೆಯ ಫಲಾನುಭವಿಗಳುಒಂದು ವರ್ಷದಲ್ಲಿ ಮನೆ ನಿರ್ಮಿಸಿಕೊಳ್ಳಬೇಕು. ಇಲ್ಲದಿದ್ದರೆ ಅವರಿಗೆ ಯೋಜನೆಯನ್ನು ರದ್ದು ಮಾಡಿ’ ಎಂದು ಸಂಸದ ಅನಂತಕುಮಾರ ಹೆಗಡೆಅಧಿಕಾರಿಗಳಿಗೆಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ‘ಜಿಲ್ಲಾ ಜಾಗೃತಿ ಮತ್ತು ಮುನ್ನೆಚ್ಚರಿಕಾ ಸಮಿತಿ’ (ದಿಶಾ) ಸಭೆಯಲ್ಲಿ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.

‘ಯೋಜನೆಯಡಿ 2014–15ರಲ್ಲಿ ಮಂಜೂರಾದಹಲವು ಮನೆಗಳ ಅಡಿಪಾಯ ಮಾತ್ರ ಆಗಿದೆ.ಇದ್ಯಾಕೆ ಹೀಗೆ’ ಎಂದು ಪ್ರಶ್ನಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿ ಜಿಲ್ಲಾ ಪಂಚಾಯ್ತಿಯೋಜನಾಧಿಕಾರಿ ವಿ.ಎಂ.ಹೆಗಡೆ, ‘ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳೇ ಮುಂದೆ ಬರುತ್ತಿಲ್ಲ. ಕಾಮಗಾರಿ ಹಮ್ಮಿಕೊಳ್ಳುವಂತೆ ಅವರಿಗೆ 2–3 ಬಾರಿ ಪತ್ರ ಬರೆದು ತಿಳಿಸಲಾಗಿದೆ’ ಎಂದು ತಿಳಿಸಿದರು.

‘ನಾಲ್ಕೈದು ಮಂದಿಯ ವಿರುದ್ಧ ಕ್ರಮ ಕೈಗೊಂಡರೆ ಉಳಿದವರೂ ಎಚ್ಚರಿಕೆ ವಹಿಸುತ್ತಾರೆ. ಮುಂದಿನ ದಿಶಾ ಸಭೆಯ ಒಳಗೆ ಈ ಬಗ್ಗೆ ಸ್ಪಷ್ಟವಾದ ನಿರ್ಧಾರಕ್ಕೆ ಬನ್ನಿ’ ಎಂದು ಅನಂತಕುಮಾರ ಹೆಗಡೆ ಸೂಚಿಸಿದರು.

‘ನೆರೆ ಪೀಡಿತ ಪ್ರದೇಶಗಳಲ್ಲಿ ಮನೆ ಕಳೆದುಕೊಂಡವರಿಗೆ ಸಿ.ಎಂ. ಆವಾಸ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಸಂತ್ರಸ್ತರ ಮೂಲನೆಲೆಗೆ ಸಮೀಪವಾಗುವಂಥ ಜಾಗವನ್ನೇ ಆಯ್ಕೆ ಮಾಡಿಕೊಳ್ಳಿ. ಫೆ.15ರ ಒಳಗಾಗಿ ಕಾರ್ಯ ಯೋಜನೆ ಸಿದ್ಧಪಡಿಸಿಕೊಳ್ಳಿ’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಮಾತನಾಡಿ, ‘ಯೋಜನೆಯ ಜಾರಿಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ 12 ಎಕರೆ ಜಮೀನನ್ನು ಗುರುತಿಸಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯ 9,600 ಬಾವಿಗಳ ನೀರು ಸೇವನೆಗೆ ಯೋಗ್ಯವಲ್ಲ ಎಂದು ವರದಿಯಲ್ಲಿ ಉಲ್ಲೇಖವಿದೆ. ಮುಂದೆಯೂ ಅದೇ ನೀರನ್ನು ಜನರು ಕುಡಿಯುತ್ತಿದ್ದರೆಈ ಸಭೆಗೆ ಅರ್ಥವಿಲ್ಲ. ಫೆಬ್ರುವರಿಯ ಒಳಗಾಗಿ ಟಾಸ್ಕ್‌ಫೋರ್ಸ್ ರಚಿಸಿ ಕ್ರಮ ಕೈಗೊಳ್ಳಿ. ಇದಕ್ಕೆ ಮಾರ್ಚ್, ಏಪ್ರಿಲ್‌ ಒಳಗಾಗಿ ಕಾರ್ಯ ಯೋಜನೆ ಸಿದ್ಧಗೊಳ್ಳಬೇಕು’ ಎಂದು ನಿರ್ದೇಶಿಸಿದರು.

‘ಮಂಗನಕಾಯಿಲೆಯಿಂದ ತೊಂದರೆಗೆ ಒಳಗಾಗಿರುವ ಸಿದ್ದಾಪುರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ವಿಶೇಷ ಚಿಕಿತ್ಸಾ ಘಟಕವನ್ನು ತೆರೆಯಬೇಕು ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಜ್ವರ ಪೀಡಿತರಿಗೆ ಪಡಿತರದ ವ್ಯವಸ್ಥೆ, ಧನಸಹಾಯ ಬೇಕು ಎಂಬ ಬೇಡಿಕೆಯಿದೆ. ಹಲವರು ಮಣಿಪಾಲ, ಮಂಗಳೂರಿಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಎಲ್ಲರಿಗೂ ಆಯುಷ್ಮಾನ್ ಭಾರತ ಯೋಜನೆಯ ಸೌಲಭ್ಯ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ‘ಟೆಫ್’ ಬೆಳೆ:‘ಮುಂಡಗೋಡ ಮತ್ತು ಹಳಿಯಾಳದಲ್ಲಿ ಇಥಿಯೋಪಿಯಾ ದೇಶದ ಟೆಫ್ ಬೆಳೆಯನ್ನು ಬೆಳೆಯಲಾಗುತ್ತಿದೆ. ಶೇ 8ರಷ್ಟು ಕಬ್ಬಿಣದ ಅಂಶ ಇರುವ ಇದರಲ್ಲಿ ಶೇ 11.8ರಷ್ಟು ಜೀರ್ಣವಾಗುವ ನಾರಿನ ಅಂಶವಿದೆ. ಇದರಿಂದ ಕ್ರೀಡಾಪಟುಗಳಿಗೆ ಹಾಗೂ ಸೈನಿಕರಿಗೆ ಅನುಕೂಲವಾಗಲಿದೆ’ ಎಂದು ಅನಂತಕುಮಾರ ಹೆಗಡೆ ತಿಳಿಸಿದರು.

‘ಈ ಬೆಳೆಯನ್ನು ಭಾರತೀಯ ಖಾದ್ಯಗಳಿಗೆ ಬಳಸುವ ವಿಧಾನವನ್ನು ಮೊದಲು ನಮ್ಮ ಮನೆಯಲ್ಲೇ ಪ್ರಯೋಗ ಮಾಡಲಾಯಿತು. ನನ್ನ ಪತ್ನಿ ಈ ಬೆಳೆಯಇಡ್ಲಿ, ದೋಸೆಮಾಡಿದ್ದರು. ನಂತರ ಫೈವ್‌ಸ್ಟಾರ್ಹೋಟೆಲ್‌ಗಳ ಬಾಣಸಿಗರನ್ನು ಕರೆದು ತಿನಿಸನ್ನುಪರಿಚಯಿಸಲಾಯಿತು.ಶೀಘ್ರವೇ ಟೆಫ್ ಖಾದ್ಯಗಳು ಪಂಚತಾರಾ ಹೋಟೆಲ್‌ಗಳಲ್ಲಿ ಸಿಗಲಿವೆ’ ಎಂದರು.

ಇದೇವೇಳೆ, ವಿವಿಧ ಇಲಾಖೆಗಳ ಪ್ರಗತಿಯಲ್ಲಿ ಸಂಸದರು ಪರಿಶೀಲಿಸಿದರು.ಶಾಸಕಿ ರೂಪಾಲಿ ನಾಯ್ಕ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.