ADVERTISEMENT

ಉತ್ತರ ಕನ್ನಡ | ವರ್ಷದ ಬಳಿಕ ಬಾಗಿಲು ತೆರೆಯಲಿದೆ ಸಂಸದರ ಕಚೇರಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 14:30 IST
Last Updated 10 ಜೂನ್ 2024, 14:30 IST
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿಗೆ ಫಲಕ ಅಳವಡಿಸಿರುವುದು
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿಗೆ ಫಲಕ ಅಳವಡಿಸಿರುವುದು   

ಕಾರವಾರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಎರಡನೇ ಮಹಡಿಯಲ್ಲಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರ ಅಧಿಕೃತ ಕಚೇರಿಯು ಸುಮಾರು ಒಂದು ವರ್ಷದ ಬಳಿಕ ಬಾಗಿಲು ತೆರೆಯಲಿದೆ. ಇದಕ್ಕಾಗಿ ಸಿದ್ಧತೆ ನಡೆದಿದೆ.

ಜನರು ದೂರು, ಅಹವಾಲು ಸಲ್ಲಿಕೆಗೆ ಅನುಕೂಲವಾಗುವಂತೆ ಜಿಲ್ಲಾಕೇಂದ್ರದಲ್ಲಿ ಸಂಸದರ ಅಧಿಕೃತ ಕಚೇರಿ ತೆರೆಯಲಾಗುತ್ತದೆ. ಉತ್ತರ ಕನ್ನಡ ಸಂಸದರ ಕಚೇರಿ ಕಳೆದ ಹಲವು ತಿಂಗಳುಗಳಿಂದ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿತ್ತು ಎಂಬ ಆರೋಪಗಳಿದ್ದವು. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿಯ ಬಾಗಿಲು ಸದಾಕಾಲ ಮುಚ್ಚಿರುವುದು ಆರೋಪಗಳಿಗೆ ಪುಷ್ಟಿ ನೀಡಿದ್ದವು.

ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆ ನಡೆದಿದ್ದು, ಹಿಂದಿನ ಸಂಸದ ಅನಂತಕುಮಾರ ಹೆಗಡೆ ಬದಲು ವಿಶ್ವೇಶ್ವರ ಹೆಗಡೆ ಕಾಗೇರಿ ಆಯ್ಕೆಯಾಗಿದ್ದಾರೆ. ಶೀಘ್ರದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಅವರು ಜಿಲ್ಲಾಕೇಂದ್ರಕ್ಕೆ ಬರಲಿರುವ ಹಿನ್ನೆಲೆಯಲ್ಲಿ ಸಂಸದರ ಕಚೇರಿಯನ್ನು ಉದ್ಘಾಟನೆಗೆ ಸಜ್ಜುಗೊಳಿಸುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ.

ADVERTISEMENT

‘ಸಂಸದರ ಕಾಯಂ ಕಚೇರಿಯ ಜತೆಗೆ ಸಂಚಾರಿ ಕಚೇರಿಯನ್ನೂ ಆರಂಭಿಸಲಾಗುವುದು. ಕ್ಷೇತ್ರ ವ್ಯಾಪ್ತಿಯ ಎಲ್ಲ 14 ತಾಲ್ಲೂಕುಗಳಲ್ಲಿಯೂ ಸಂಚರಿಸಿ ಜನರ ಸಮಸ್ಯೆ ಆಲಿಸಲಾಗುವುದು’ ಎಂದು ಚುನಾವಣೆಗೆ ಮುನ್ನ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದ್ದರು.

ಕಾಯಂ ಕಚೇರಿಯನ್ನು ಜನಸ್ನೇಹಿಯಾಗಿ ಪರಿವರ್ತಿಸುವ ಜತೆಗೆ ಸಂಚಾರಿ ಕಚೇರಿಯನ್ನು ಆರಂಭಿಸಬಹುದೆ ಎಂಬ ಕುತೂಹಲ ಜನರಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.