ADVERTISEMENT

ಶಿರಸಿ | ವಿಲೇವಾರಿ ಘಟಕದಲ್ಲಿ ತುಂಬಿದ ಕಸ

ಸ್ಥಾಪನೆಯಾದ ಎಂಆರ್‌ಎಫ್ ಘಟಕ: ತ್ಯಾಜ್ಯ ಒಯ್ಯಲು ನಿರುತ್ಸಾಹ

ರಾಜೇಂದ್ರ ಹೆಗಡೆ
Published 10 ಸೆಪ್ಟೆಂಬರ್ 2025, 7:05 IST
Last Updated 10 ಸೆಪ್ಟೆಂಬರ್ 2025, 7:05 IST
ಒಣ ತ್ಯಾಜ್ಯದಿಂದ ತುಂಬಿರುವ ಶಿರಸಿ ತಾಲ್ಲೂಕಿನ ಗ್ರಾಮ ಪಂಚಾಯಿತಿಯೊಂದದರ ಕಸ ಸಂಗ್ರಹಣಾ ಘಟಕ
ಒಣ ತ್ಯಾಜ್ಯದಿಂದ ತುಂಬಿರುವ ಶಿರಸಿ ತಾಲ್ಲೂಕಿನ ಗ್ರಾಮ ಪಂಚಾಯಿತಿಯೊಂದದರ ಕಸ ಸಂಗ್ರಹಣಾ ಘಟಕ   

ಶಿರಸಿ: ಗ್ರಾಮ ಪಂಚಾಯಿತಿಗಳ ಘನತ್ಯಾಜ್ಯದ ಸಮರ್ಪಕ ನಿರ್ವಹಣೆಗಾಗಿ ತಾಲ್ಲೂಕಿಗೆ ಮಂಜೂರಾದ ಮೆಟೀರಿಯಲ್ ರಿಕವರಿ ಫೆಸಿಲಿಟಿ (ಎಂಆರ್‌ಎಫ್) ಘಟಕ ಇನ್ನೂ ಆರಂಭವಾಗದ ಕಾರಣ ಒಣ ಕಸ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿದೆ.

ಸ್ವಚ್ಛ ಭಾರತ ಮಿಷನ್ ಅಡಿ ತಾಲ್ಲೂಕಿನ 32 ಗ್ರಾಮ ಪಂಚಾಯಿತಿಗಳ ಪೈಕಿ 28 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಣ ಕಸ ವಿಲೇವಾರಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಒಣ ಕಸ ಸಂಗ್ರಹಿಸಿ ಎರಡು ವಿಭಾಗ ಮಾಡಿ ಅದನ್ನು ಗುಜರಿ ಅಂಗಡಿಗೆ ಮಾರಾಟ ಮಾಡಬೇಕು, ಇಲ್ಲವೇ ಗುತ್ತಿಗೆ ನೀಡಬೇಕು ಎಂಬ ನಿಯಮವಿದೆ. ಆದರೆ, ಬಹುತೇಕ ಘಟಕಗಳಲ್ಲಿ ಈ ನಿಯಮ ಪಾಲನೆ ಆಗದೆ, ಒಣ ಕಸ ವಿಲೇವಾರಿ ಘಟಕಗಳು ಕಸ ಸಂಗ್ರಹಿಸಿಡಲಷ್ಟೇ ಸೀಮಿತವಾಗಿವೆ.

‘ಬಹುತೇಕ ಪಂಚಾಯಿತಿ ವ್ಯಾಪ್ತಿಯ ಒಣ ಕಸ ವಿಲೇವಾರಿ ಘಟಕಗಳ ಕಟ್ಟಡಗಳು ಕಸ ಸಂಗ್ರಹಣೆಯಿಂದ ತುಂಬಿವೆ. ಕೆಲವೆಡೆ ಇಡೀ ಕಟ್ಟಡದಲ್ಲಿ ಪ್ಲಾಸ್ಟಿಕ್ ಕಸದ ಮೂಟೆ ತುಂಬಿರುವುದು ಕಾಣಸಿಗುತ್ತದೆ.  ಮತ್ತೆ ಸಂಗ್ರಹವಾಗುವ ಕಸದ ಸಂಗ್ರಹಣೆಗೆ ಜಾಗವಿಲ್ಲದೆ ಘಟಕಗಳ ಹೊರಗೆ ಸುರಿಯಲಾಗುತ್ತಿದೆ’ ಎಂದು ಪಿಡಿಒವೊಬ್ಬರು ಹೇಳಿದರು.

ADVERTISEMENT

‘ತ್ಯಾಜ್ಯವನ್ನು ಒಮ್ಮೆಲೆ ತೆಗೆದುಕೊಂಡು ಹೋಗಲು ಯಾವುದೇ ಸಿಮೆಂಟ್ ಇಲ್ಲವೇ ಪ್ಲಾಸ್ಟಿಕ್ ತಯಾರಿಕಾ ಕಂಪನಿಯವರು ಮುಂದೆಬರುತ್ತಿಲ್ಲ. ಇದರಿಂದ ಎಂಆರ್‌ಎಫ್ ಘಟಕ ಸ್ಥಾಪನೆ ಅನಿವಾರ್ಯವಾಗಿದ್ದು, ಪ್ರಸಕ್ತ ವರ್ಷ ಮಂಜೂರಾದ ಎಂಆರ್‌ಎಫ್ ಘಟಕವನ್ನು ತಾಲ್ಲೂಕಿನ ಯಡಳ್ಳಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಚನ್ನಬಸಪ್ಪ ಹಾವಣಗಿ ತಿಳಿಸಿದರು.

‘ಜಾಗದ ಕೊರತೆ ಸೇರಿದಂತೆ ವಿವಿಧ ಕಾರಣಕ್ಕೆ ತಾಲ್ಲೂಕಿನ ಕೆಲವೆಡೆ ಪ್ರತಿ ಎರಡು ಅಥವಾ ಮೂರು ಗ್ರಾಮ ಪಂಚಾಯಿತಿಗೆ ಒಂದರಂತೆ ಘಟಕ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ನಗರಕ್ಕೆ ಹೊಂದಿಕೊಂಡಿರುವ ಕೆಲವು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಕಸ ಸಂಗ್ರಹ ಆಗುತ್ತಿದ್ದು, ಅವುಗಳನ್ನು ಗ್ರಾಮೀಣ ಭಾಗಕ್ಕೆ ತರಲಾಗುತ್ತಿದೆ. ಘಟಕಗಳಲ್ಲಿ ಮಿತಿ ಮೀರಿ ಕಸ ಸಂಗ್ರಹ ಆಗುತ್ತಿದ್ದು, ಇದು ವಿಲೇವಾರಿಯ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಎಂಆರ್‌ಎಫ್ ಘಟಕ ಆರಂಭಿಸಲು ಪ್ರಯತ್ನ ನಡೆದಿದ್ದು ಘಟಕ ನಿರ್ಮಾಣವಾದರೆ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಮುಕ್ತಿ ಸಿಗುತ್ತದೆ
ಚನ್ನಬಸಪ್ಪ ಹಾವಣಗಿ ತಾಲ್ಲೂಕು ಪಂಚಾಯಿತಿ ಇಒ

ವೇತನ ನೀಡಲೂ ಸಮಸ್ಯೆ

‘ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಟಕಗಳಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಅಲ್ಲಿಯೇ ಸಂಗ್ರಹಿಸುವಂತಾಗಿದ್ದು ಉಗ್ರಾಣ ಕಾರ್ಯಾಲಯಗಳಲ್ಲೂ ಕಾಲಿಡಲಾಗದ ಸ್ಥಿತಿ ಇದೆ. ತ್ಯಾಜ್ಯ ಕೊಂಡೊಯ್ಯಲು ಯಾರೂ ಬರುತ್ತಿಲ್ಲ. ಇದರಿಂದ ಕಸ ವಿಲೇವಾರಿ ಮಾಡುವ ಸಿಬ್ಬಂದಿಗೆ ಸರಿಯಾಗಿ ಸಂಬಳ ಕೂಡ ನೀಡಲಾಗುತ್ತಿಲ್ಲ’ ಎಂದು ಪಿಡಿಒವೊಬ್ಬರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.