
ಮುಂಡಗೋಡ: ತಾಲ್ಲೂಕಿನ ಚಿಗಳ್ಳಿಯ ದೇವಕಿ ಛಾಯಪ್ಪ ಕಲಾಲ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ದಾಸಪ್ಪ ಎ. ಅವರನ್ನು ಅಮಾನತು ಮಾಡಿ, ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಡಿ.ಆರ್.ನಾಯ್ಕ ಆದೇಶ ಹೊರಡಿಸಿದ್ದಾರೆ.
ದಾಸಪ್ಪ ಅವರು ಅದೇ ಶಾಲೆಯ ಮೂರು ಜನ ಶಿಕ್ಷಕಿಯರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಮೂರು ಜನ ಶಿಕ್ಷಕಿಯರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಸಹಶಿಕ್ಷಕ ದಾಸಪ್ಪ ಮೇಲೆ, ಹಲ್ಲೆ, ಜೀವಬೆದರಿಕೆ ದೂರು ದಾಖಲಿಸಿದ್ದರು.
ಇದರಿಂದ ರೋಸಿಹೋಗಿದ್ದ ಗ್ರಾಮಸ್ಥರು, ಶಾಲಾ ಶೈಕ್ಷಣಿಕ ವಾತಾವರಣ ಹಾಳಾಗುತ್ತಿದೆ. ಕೂಡಲೇ ಸಹಶಿಕ್ಷಕನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಈಚೆಗೆ ಪ್ರತಿಭಟನೆ ನಡೆಸಿ, ಶಿರಶಿ ಡಿಡಿಪಿಐ ಅವರಿಗೆ ಮನವಿ ನೀಡಿದ್ದರು. ಈ ಹಿನ್ನೆಲೆಯಲ್ಲಿ, ಡಿಡಿಪಿಐ ಡಿ.ಆರ್.ನಾಯ್ಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರಿಂದ ಮಾಹಿತಿ ಪಡೆದುಕೊಂಡಿದ್ದರು.
‘ಶೈಕ್ಷಣಿಕ ವಾತಾವರಣ ಕಲುಷಿತವಾಗಿ ಉಳಿದ ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡಲಾಗದಂತ ಸ್ಥಿತಿಗೆ ದಾಸಪ್ಪ ಕಾರಣವಾಗಿರುವುದು ಪ್ರಾಥಮಿಕ ತನಿಖೆಯಿಂದ ಮೇಲ್ನೋಟಕ್ಕೆ ಕಂಡುಬಂದಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು, ನಾಗರಿಕ ಸೇವಾ ನಿಯಮಾವಳಿಯಂತೆ, ಸಹಶಿಕ್ಷಕ ದಾಸಪ್ಪ ಎ. ಅವರನ್ನು ನ.28ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ, ಇಲಾಖಾ ವಿಚಾರಣೆ ಕಾಯ್ದಿರಿಸಿ, ಅಮಾನತು ಮಾಡಲಾಗಿದೆʼ ಎಂದು ಡಿಡಿಪಿಐ ಡಿ.ಆರ್.ನಾಯ್ಕ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.