ADVERTISEMENT

ಕಡಿಮೆ ದರಕ್ಕೆ ಬಂಗಾರ ಮಾರಾಟದ ಆಮಿಷವೊಡ್ಡಿ ವಂಚನೆ

ಮುಂಡಗೋಡ: ₹ 22.50 ಲಕ್ಷ ದೋಚಿದ ಪ್ರಕರಣಕ್ಕೆ ತಿರುವು

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 16:39 IST
Last Updated 17 ಜುಲೈ 2021, 16:39 IST
ಶಿರಸಿ ಡಿ.ವೈ.ಎಸ್ಪಿ ರವಿ ನಾಯ್ಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು
ಶಿರಸಿ ಡಿ.ವೈ.ಎಸ್ಪಿ ರವಿ ನಾಯ್ಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು   

ಮುಂಡಗೋಡ: ಕಡಿಮೆ ದರದಲ್ಲಿ ಬಂಗಾರ ಖರೀದಿಸಲು ಹೋದ ವ್ಯಕ್ತಿಯೊಬ್ಬರ ₹ 22.50 ಲಕ್ಷವನ್ನು ದುಷ್ಕರ್ಮಿಗಳು ದೋಚಿಕೊಂಡು ಹೋಗಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ಗೆರಗಾಂವ ಗ್ರಾಮದ ಶಿವಗೌಡ ಪಾಟೀಲ ಮೋಸ ಹೋದವರು. ಕಡಿಮೆ ದರದಲ್ಲಿ ಬಂಗಾರ ಕೊಡುವುದಾಗಿ ರಾಜಣ್ಣ ಎಂಬ ವ್ಯಕ್ತಿಯು, ಮೊಬೈಲ್ ಮೂಲಕ ಶಿವಗೌಡ ಅವರಿಗೆ ತಿಳಿಸಿದದರು. ಇದನ್ನು ನಂಬಿದ ಶಿವಗೌಡ ಅವರು ಸ್ನೇಹಿತ ಅಸ್ಲಂ ಜೊತೆಗೂಡಿ, ತಾಲ್ಲೂಕಿನ ಮಳಗಿಯ ಧರ್ಮಾ ಜಲಾಶಯದ ಸನಿಹ ಶುಕ್ರವಾರ ಬೆಳಿಗ್ಗೆ ಹಣದ ಸಮೇತ ಬಂದಿದ್ದರು.

ಬಂಗಾರ ಕೊಡುವುದಾಗಿ ಬಂದ ವಂಚಕರ ತಂಡದ ಇಬ್ಬರು, ಸ್ವಲ್ಪ ಹೊತ್ತು ಮಾತುಕತೆ ನಡೆಸಿದ್ದರು. ನಂತರ ಏಕಾಏಕಿ ಶಿವಗೌಡ ಅವರ ಬಳಿಯಿದ್ದ ಹಣದ ಬ್ಯಾಗನ್ನು ಕಿತ್ತುಕೊಂಡು ಜಲಾಶಯದ ಕೆಳಗಿನ ಅರಣ್ಯದಲ್ಲಿ ಓಡಿದ್ದರು. ಆರೋಪಿಗಳನ್ನು ಬೆನ್ನತ್ತಿದ್ದಾಗ ಮತ್ತೆ ಮುಂದೆ ವಂಚಕರ ತಂಡದ ಐವರು ಕಲ್ಲು, ಬಡಿಗೆಯಿಂದ ಹಲ್ಲೆ ಮಾಡಲು ಮುಂದಾದರು. ಈ ಮೂಲಕ ವಂಚಕರ ತಂಡವು ವ್ಯವಸ್ಥಿತವಾಗಿ ಹಣ ದೋಚಿದೆ ಎಂದು ದೂರಲಾಗಿದೆ.

ADVERTISEMENT

ಗೋಡಂಬಿ ಖರೀದಿಗೆ ಬಂದಿದ್ದಾಗಿ ಹೇಳಿದ್ದರು:

ಹಣ ಕಳೆದುಕೊಂಡಿರುವ ಶಿವಗೌಡ ಪಾಟೀಲ, ಶುಕ್ರವಾರ ಸಂಜೆಯವರೆಗೂ ಪೊಲೀಸರಿಗೆ, ‘ಗೋಡಂಬಿ ಖರೀದಿಗೆಂದು ಬಂದಿದ್ದೆ. ಗೋಡಂಬಿ ಕೊಡಿಸುವುದಾಗಿ ನಂಬಿಸಿ, ₹ 28 ಲಕ್ಷ ಹಣವಿದ್ದ ಬ್ಯಾಗನ್ನು ವಂಚಕರು ಎಗರಿಸಿದ್ದಾರೆ’ ಎಂದೇ ಹೇಳಿಕೆ ನೀಡಿದ್ದರು.

ಆದರೆ, ಶಿರಸಿ ಡಿ.ವೈ.ಎಸ್.ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಹೆಚ್ಚಿನ ತನಿಖೆ ಮುಂದುವರಿದಾಗ, ಕಡಿಮೆ ದರದಲ್ಲಿ ಬಂಗಾರ ಖರೀದಿಸಲು ಹೋಗಿ ಮೋಸ ಹೋಗಿರುವ ವಿಷಯ ಬಾಯಿಬಿಟ್ಟರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಪಿ.ಎಸ್.ಐ ಎನ್.ಡಿ.ಜಕ್ಕಣ್ಣವರ್, ಪಿ.ಎಸ್.ಐ ಬಸವರಾಜ ಮಬನೂರ ಹಾಗೂ ಶಿರಸಿ, ಯಲ್ಲಾಪುರ, ಬನವಾಸಿ, ಮುಂಡಗೋಡ ಠಾಣೆಯ ಸಿಬ್ಬಂದಿ ನೇತೃತ್ವದಲ್ಲಿ ಆರೋಪಿಗಳ ಪತ್ತೆ ಕಾರ್ಯಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.