ಮುಂಡಗೋಡ: ಅಂಗಡಿಗೆ ಬಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ಹಣ ಕೊಡಲು ನಿರಾಕರಿಸಿದ್ದರಿಂದ, ಸಿಟ್ಟಿಗೆದ್ದ ಅವರು ಅಂಗಡಿ ಮಾಲೀಕನಿಗೆ ಬಾಟಲಿಯಿಂದ ಹಲ್ಲೆ ಮಾಡಿ, ಬಿಡಿಸಲು ಬಂದ ನಾಲ್ಕು ಜನ ಕುಟುಂಬ ಸದಸ್ಯರ ಮೇಲೂ ಹಲ್ಲೆ ಮಾಡಿದ್ದಾರೆ.
ಇಲ್ಲಿನ ಯಲ್ಲಾಪುರ ರಸ್ತೆಯಲ್ಲಿರುವ ಶಿವಪ್ರಕಾಶ ಕೂಲ್ಡ್ರಿಂಕ್ಸ್ ಅಂಗಡಿಗೆ ಶನಿವಾರ ಬಂದ ಆರು ಲಿಂಗತ್ವ ಅಲ್ಪಸಂಖ್ಯಾತರು ಹಣ ಕೇಳಿದ್ದಾರೆ. ಆದರೆ, ಅಂಗಡಿ ಮಾಲೀಕ ರಾಜೇಶ ನಿಡಗುಂದಿ ಹಣ ಕೊಡಲು ನಿರಾಕರಿಸಿದಾಗ, ಕೊಲೆ ಮಾಡುವ ಉದ್ದೇಶದಿಂದ ಆತನ ಮೇಲೆ ಬಾಟಲಿಯಿಂದ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಗಾಯಾಳು ರಾಜೇಶ ಅವರ ಪತ್ನಿ, ಮೂರು ವರ್ಷದ ಮಗಳು, ತಾಯಿ ಹಾಗೂ ಸಹೋದರನ ಮೇಲೂ ಹಲ್ಲೆ ಮಾಡಿದ್ದಾರೆ.
ಹುಬ್ಬಳ್ಳಿ ನೇಕಾರ ನಗರ, ನೂರಾನಿ ಪ್ಲಾಟ್ ನಿವಾಸಿಗಳಾದ ನಕ್ಷತ್ರಾ ಗುರುನಾಥ ಜಕ್ಲಿ (26), ವರುಣ ಬಸವರಾಜ ಗದಗ (20), ತಾನು ಮಾಬೂಬು ಸವಣೂರು (20), ಸನಮ್ ದಾವಣಗೆರೆ (20), ಪ್ರೀತಿ ಮಾಬುಬಸಾಬ ಶಾಡಗುಪ್ಪಿ (25), ಜಾನಕಿ (22) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಆಕ್ರೋಶಗೊಂಡ ನೂರಾರು ಜನ ಪೊಲೀಸ್ ಠಾಣೆಯ ಆವರಣದಲ್ಲಿ ಜಮಾಯಿಸಿ, ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಅಂಗಡಿಯಲ್ಲಿದ್ದ ಸಾಮಗ್ರಿ, ತರಕಾರಿಯನ್ನು ದ್ವಂಸಗೊಳಿಸಿ, ಹಲ್ಲೆ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ ರಂಗನಾಥ ನೀಲಮ್ಮನವರ ಸಾರ್ವಜನಿಕರನ್ನು ಸಮಾಧಾನಪಡಿಸಿ, ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಮನವಿ: ಪಟ್ಟಣದಲ್ಲಿ ಕೆಲವು ದಿನಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಗಲಾಟೆ, ದೌರ್ಜನ್ಯ ಹಾಗೂ ಕಿರುಕುಳ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರು, ವ್ಯಾಪಾರಸ್ಥರು ಭಯದ ವಾತಾವರಣದಲ್ಲಿ ಇರುವಂತಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸ್ಥಳೀಯ ವ್ಯಾಪಾರಸ್ಥ ಸಂಘದವರು ಸಿಪಿಐ ರಂಗನಾಥ ನೀಲಮ್ಮನವರ ಅವರಿಗೆ ಶನಿವಾರ ಮನವಿ ನೀಡಿದರು.
ಪಟ್ಟಣದಲ್ಲಿ ಶನಿವಾರ ನಡೆದ ಘಟನೆಯೂ ಇದಕ್ಕೆ ಸಾಕ್ಷಿಯಾಗಿದ್ದು, ಕಡಿಮೆ ಹಣ ನೀಡಿದರೆ ಅದನ್ನು ತೆಗೆದುಕೊಳ್ಳದೇ, ಇಂತಿಷ್ಟೇ ಹಣ ಕೊಡಬೇಕು ಎಂದು ಗಲಾಟೆ ಮಾಡುತ್ತಾರೆ. ಕೊಡದಿದ್ದರೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ವ್ಯಾಪಾರಸ್ಥರಿಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದರು.
ಸಿಪಿಐ ರಂಗನಾಥ ನೀಲಮ್ಮನವರ ಮಾತನಾಡಿ, ಇನ್ನು ಮುಂದೆ ಅಂಗಡಿಗಳಿಗೆ ಲಿಂಗತ್ವ ಅಲ್ಪಸಂಖ್ಯಾತರು, ಅಪರಿಚಿತರು ಬಂದು ಹಣ ಕೇಳಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಭಿಕ್ಷಾಟನೆ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಇಂತಿಷ್ಟು ಹಣ ಕೊಡಿ ಎಂದು ಗಲಾಟೆ ಮಾಡುವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. 112 ಹಾಗೂ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದರೆ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ನಾರಾಯಣ ಉಪ್ಪುಂದ, ಮಂಜುನಾಥ ಮತ್ತಿಗಟ್ಟಿ, ಸುರೇಶ ಕುಲ್ಲೊಳ್ಳಿ, ಶರತ್ ಕೆದಿಲಾಯಿ, ಜಗದೀಶ ವಾಲಿಶೆಟ್ಟರ, ಅಹ್ಮದರಜಾ ಪೇಡೆವಾಲೆ, ಮಹಾಂತೇಶ ಗಾಣಿಗೇರ, ರಮೇಶ ಶೆಟ್ಟಿ, ಶಿವಪ್ಪ ಮತ್ತಿಗಟ್ಟಿ, ವಿಶ್ವನಾಥ ಭಜಂತ್ರಿ, ರಾಘವೇಂದ್ರ ಎಲ್.ಎಂ., ಬಸವರಾಜ ತನಖೆದಾರ, ಅಷ್ಪಾಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.