ADVERTISEMENT

ಶಾಲೆ ಪರಿಸರದಲ್ಲಿ ಚರಂಡಿ ನೀರು: ಬಿಸಿಲಿನಲ್ಲಿ ಕುಳಿತು ಪಾಠ ಕೇಳುವ ಮಕ್ಕಳು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 7:07 IST
Last Updated 19 ಡಿಸೆಂಬರ್ 2023, 7:07 IST
<div class="paragraphs"><p>ಶಾಲೆಯ ಕಟ್ಟಡಕ್ಕೆ ತಾಗಿಕೊಂಡಿರುವ ಚರಂಡಿಯ ತ್ಯಾಜ್ಯ ಮುಂದೆ ಸಾಗದೇ, ದುರ್ನಾತ ಬೀರುತ್ತಿರುವುದರಿಂದ&nbsp;ಶಾಲೆಯ ಆವರಣದಲ್ಲಿ ಬಿಸಿಲಿನಲ್ಲಿ ಕುಳಿತು ಪಾಠ ಕೇಳುತ್ತಿರುವ ಮಕ್ಕಳು</p></div>

ಶಾಲೆಯ ಕಟ್ಟಡಕ್ಕೆ ತಾಗಿಕೊಂಡಿರುವ ಚರಂಡಿಯ ತ್ಯಾಜ್ಯ ಮುಂದೆ ಸಾಗದೇ, ದುರ್ನಾತ ಬೀರುತ್ತಿರುವುದರಿಂದ ಶಾಲೆಯ ಆವರಣದಲ್ಲಿ ಬಿಸಿಲಿನಲ್ಲಿ ಕುಳಿತು ಪಾಠ ಕೇಳುತ್ತಿರುವ ಮಕ್ಕಳು

   

ಮುಂಡಗೋಡ: ಇಲ್ಲಿನ ಹಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2 ರಲ್ಲಿ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಪಾಠ ಕೇಳುವ ಪರಿಸ್ಥಿತಿ ಬಂದೊದಗಿದೆ.

ಶಾಲೆಯ ಕಟ್ಟಡಕ್ಕೆ ತಾಗಿ ಚರಂಡಿ ಇದ್ದು, ಅದರಲ್ಲಿನ ತ್ಯಾಜ್ಯ ಮುಂದೆ ಸಾಗದೇ, ದುರ್ನಾತ ಬೀರುತ್ತಿದೆ. ಇದರಿಂದ ಮಕ್ಕಳು ತರಗತಿ ಕೊಠಡಿಯಲ್ಲಿ ಕುಳಿತು ಪಾಠ ಕೇಳಲು ಹಿಂಜರಿಯುತ್ತಿದ್ದಾರೆ. ತರಗತಿ ಕೊಠಡಿಯಲ್ಲಿ ದುರ್ನಾತ ಬೀರುತ್ತಿರುವುದರಿಂದ ಬಹುತೇಕ ಮಕ್ಕಳು ಶಾಲೆಗೆ ಗೈರಾಗುತ್ತಿದ್ದಾರೆ ಎಂದು ಪಾಲಕರು ದೂರುತ್ತಿದ್ದಾರೆ.

ADVERTISEMENT

ದುರ್ನಾತ ವಾಸನೆ ತಡೆದುಕೊಳ್ಳಲು ಆಗದೇ, ಮಕ್ಕಳು ಶಾಲೆಯ ಆವರಣದಲ್ಲಿ ಬಿಸಿಲಿನಲ್ಲಿ ಕುಳಿತು ಪಾಠ ಕೇಳುತ್ತಿರುವ ದೃಶ್ಯ ಮಂಗಳವಾರ ಕಂಡುಬಂತು.

'ಕಳೆದ ಎರಡು ವರ್ಷಗಳಿಂದ ಶಾಲೆಯ ಕಟ್ಟಡದ ಹಿಂಬದಿಯಲ್ಲಿರುವ ಚರಂಡಿಯಿಂದ ದುರ್ನಾತ ಬೀರುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ತಿಳಿಸಿದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಶಿಕ್ಷಣ ಮಟ್ಟ ಉತ್ತಮವಾಗಿದ್ದರೂ, ಶಾಲಾ ವಾತಾವರಣ ಸರಿ ಇಲ್ಲದಿರುವುದರಿಂದ ಕಳೆದ ವರ್ಷ 60ರಷ್ಟು ಮಕ್ಕಳು ವರ್ಗಾವಣೆ ಪತ್ರ ತೆಗೆದುಕೊಂಡು‌ ಬೇರೆ ಶಾಲೆಗೆ ಹೋಗಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದೆ' ಎಂದು ಮುಖ್ಯ ಶಿಕ್ಷಕ ನಾಗರಾಜ ಕಳಲಕೊಂಡ ಹೇಳಿದರು.

'ಸರ್ಕಾರಿ ಶಾಲೆಯ ಒಳಗಡೆ ಮಕ್ಕಳು ಕುಳಿತುಕೊಳ್ಳಲು ಆಗುತ್ತಿಲ್ಲ. ಅಷ್ಟು ಕೆಟ್ಟ ವಾಸನೆ ಬರುತ್ತಿದೆ. ಖಾಸಗಿ ಲೇಔಟ್‌ ಮಾಲೀಕರ ಕಿತ್ತಾಟದಿಂದ ಚರಂಡಿಯ ನೀರು ಮುಂದೆ ಸಾಗದೇ ಶಾಲೆಯ ಹಿಂಬದಿ ಸಂಗ್ರಹಗೊಳುತ್ತಿದೆ. ಇದರಿಂದ ಮಕ್ಕಳು ತರಗತಿಯಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ' ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ ಕರಿಗಾರ ಹೇಳಿದರು.

'ಬಹಳ ದಿನಗಳಿಂದ ಕೆಟ್ಟ ವಾಸನೆ ಬರುತ್ತಿದೆ. ಶಾಲೆಗೆ ಬರಲು ಮನಸ್ಸು ಆಗುತ್ತಿಲ್ಲ' ಎಂದು ವಿದ್ಯಾರ್ಥಿನಿ ದೂರಿದರು.

ಇಷ್ಟೆಲ್ಲ ಸಮಸ್ಯೆ ಇದ್ದರೂ ಶಾಲೆಗೆ ಬಿಇಒ ಬಾರದಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಯಿತು.

'ಶಾಲೆಯ ಸನಿಹ ತ್ಯಾಜ್ಯ ನೀರು ಸಂಗ್ರಹಗೊಳ್ಳುತ್ತಿದೆ. ಇದರಿಂದ ದುರ್ವಾಸನೆ ಬೀರುತ್ತಿದೆ. ಈ ಬಗ್ಗೆ ಮುಖ್ಯಾಧಿಕಾರಿಗೆ ತಿಳಿಸಿದ್ದು, ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ' ಎಂದು ಬಿಇಒ ಜಕಣಾಚಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.