
ಮುಂಡಗೋಡ: ತಾಲ್ಲೂಕಿನ ಗುಂಜಾವತಿ, ಬ್ಯಾನಳ್ಳಿ, ಕ್ಯಾತನಳ್ಳಿ ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಕೆಲವೆಡೆ ಅಡಿಕೆ ಗಿಡಗಳನ್ನು ಮುರಿದು ಹಾಕಿದರೆ, ಮತ್ತೆ ಕೆಲವೆಡೆ ಕೊಯ್ಲಿಗೆ ಬಂದಿರುವ ಭತ್ತದ ಗದ್ದೆಗಳಲ್ಲಿ ಸಂಚರಿಸಿ, ಬೆಳೆ ಹಾನಿ ಮಾಡಿವೆ.
ಚವಡಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯ ಗದ್ದೆಗಳಲ್ಲಿ ಶನಿವಾರ ರಾತ್ರಿ ನಾಲ್ಕು ಕಾಡಾನೆಗಳು ಸಂಚರಿಸಿರುವುದನ್ನು ರೈತರು ದೃಢಪಡಿಸಿದ್ದಾರೆ. ಕಳೆದ ಎರಡು ವಾರಗಳ ದಿನಗಳ ಹಿಂದೆ ತಾಲ್ಲೂಕಿನ ಗುಂಜಾವತಿ, ಬೆಡಸಗಾಂವ್, ಬ್ಯಾನಳ್ಳಿ, ಕಲಕೇರಿ ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದವು.
ಕಾಡಾನೆಗಳ ವಾರ್ಷಿಕ ಸಂಚಾರದ ಆತಂಕದ ಹಿನ್ನೆಲೆ ಅರಣ್ಯದಂಚಿನ ರೈತರು ಕೊಯ್ಲಿಗೆ ಬಂದಿರುವ ಬೆಳೆ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ. ತಡರಾತ್ರಿವರೆಗೂ ಗದ್ದೆಯಲ್ಲಿ ಉಳಿದು ಬೆಳೆ ಕಾಯುತ್ತಿದ್ದಾರೆ.
‘ಚವೆಡಳ್ಳಿ ಭಾಗದಲ್ಲಿ ಕಾಡಾನೆಗಳು ಸಂಚಾರಿಸಿರುವುದು ಹೆಜ್ಜೆ ಗುರುತುಗಳಿಂದ ಗೊತ್ತಾಗಿದೆ. ಮುಂದಿನ ಎರಡು ದಿನಗಳವರೆಗೆ ಈ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಲಾಗುವುದು’ ಎಂದು ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಹೇಳಿದರು.
‘ಬ್ಯಾನಳ್ಳಿ ಪ್ರದೇಶದ ಗದ್ದೆ ಹಾಗೂ ತೋಟಗಳಲ್ಲಿ ಕಾಡಾನೆಗಳು ಸಂಚರಿಸಿದ್ದರಿಂದ ಅಲ್ಪ ಪ್ರಮಾಣದ ಬೆಳೆ ಹಾನಿ ಆಗಿದೆ. ಭತ್ತ ಹಾಗೂ ಗೋವಿನಜೋಳ ಈಗಾಗಲೇ ಕಟಾವು ಮಾಡಲಾಗಿದೆ. ತೋಟಗಳಿಗೆ ಕಾಡಾನೆಗಳು ನುಗ್ಗಿದರೆ ಬೆಳೆ ಹಾನಿ ಆಗಬಹುದು’ ಎಂದು ಉಪವಲಯ ಅರಣ್ಯಾಧಿಕಾರಿ ರಾಕೇಶ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.