ADVERTISEMENT

ಮುಂಡಿಗೆ ಕೆರೆ ‘ಪಕ್ಷಿಧಾಮ’ ಘೋಷಣೆಗೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 13:26 IST
Last Updated 5 ನವೆಂಬರ್ 2020, 13:26 IST
ಶಿರಸಿ ತಾಲ್ಲೂಕಿನ ಮುಂಡಿಗೆ ಕೆರೆಯಲ್ಲಿ ಬೆಳ್ಳಕ್ಕಿಗಳ ಕಲರವ (ಸಂಗ್ರಹ ಚಿತ್ರ)
ಶಿರಸಿ ತಾಲ್ಲೂಕಿನ ಮುಂಡಿಗೆ ಕೆರೆಯಲ್ಲಿ ಬೆಳ್ಳಕ್ಕಿಗಳ ಕಲರವ (ಸಂಗ್ರಹ ಚಿತ್ರ)   

ಶಿರಸಿ: ಸೋಂದಾ ಮುಂಡಿಗೆ ಕೆರೆಯನ್ನು ‘ಪಕ್ಷಿಧಾಮ’ ಎಂದು ಘೋಷಿಸಲು ವನ್ಯಜೀವಿ ಇಲಾಖೆಗೆ ಶಿಫಾರಸು ಮಾಡುವುದು ಸೇರಿದಂತೆ ವಿವಿಧ ನಿರ್ಣಯಗಳನ್ನು ರಾಜ್ಯ ಜೀವವೈವಿಧ್ಯ ಮಂಡಳಿಯು ತೀರ್ಮಾನಿಸಿದೆ.

ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಈಚೆಗೆ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಕುಮಟಾದ ಕಗ್ಗಭತ್ತ, ಅಂಕೋಲಾದ ಕರಿ ಇಶಾಡ್ ಮಾವಿನ ಬೆಳೆಗಳಿಗೆ ಜಾಗತಿಕ ಗುರುತು ಮಾನ್ಯತೆ (ಜಿ.ಐ) ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲೂ ನಿರ್ಣಯಿಸಲಾಗಿದೆ.

ADVERTISEMENT

ಶಿರಸಿ ತಾಲ್ಲೂಕಿನ ಸೋಂದಾ ಗ್ರಾಮದ ಮುಂಡಿಗೆ ಕೆರೆಯ ಪ್ರದೇಶದಲ್ಲಿ ಬೆಳ್ಳಕ್ಕಿಗಳು ಸಾಕಷ್ಟು ಸಂಖ್ಯೆಯಲ್ಲಿ ವಾಸಿಸುತ್ತವೆ. ಈ ಜಾಗವನ್ನು ಸ್ಥಳೀಯ ಗ್ರಾಮ ಪಂಚಾಯಿತಿಯು ಈಗಾಗಲೇ ‘ಜೈವಿಕ ತಾಣ’ ಎಂದು ಗುರುತಿಸಿದೆ. ‘ಪಕ್ಷಿಧಾಮ’ ಎಂದು ಘೋಷಿಸಲು ಪ್ರಸ್ತಾವ ಸಲ್ಲಿಸಿದ್ದು, ಜೀವವೈವಿಧ್ಯ ಮಂಡಳಿಯು ಪುರಸ್ಕರಿಸಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವನ್ಯಜೀವಿ ಇಲಾಖೆಗೆ ಶಿಫಾರಸು ಮಾಡಲಾಗಿದೆ.

ಕುಮಟಾ ತಾಲ್ಲೂಕಿನಲ್ಲಿ ವಿಶೇಷವಾಗಿ ಬೆಳೆಯುವ ಗಜನಿ ಕಗ್ಗ ಭತ್ತ, ಅಂಕೋಲಾ ತಾಲ್ಲೂಕಿನ ಕರಿ ಇಶಾಡ್ ಮಾವಿನ ಹಣ್ಣು ವಿನಾಶದ ಅಂಚಿನಲ್ಲಿರುವ ಕೃಷಿ ಮತ್ತು ತೋಟಗಾರಿಕಾ ಜೀವವೈವಿಧ್ಯ ತಳಿಗಳಾಗಿವೆ. ಇವುಗಳ ಉಳಿವಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ‘ಜಾಗತಿಕ ಗುರುತು’ (ಜಿ.ಐ) ಸ್ಥಾನಮಾನ ನೀಡಬೇಕು ಎಂದು ಮಂಡಳಿಯು ಶಿಫಾರಸು ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.