ADVERTISEMENT

ನಾಲ್ವರ ಹತ್ಯೆ ಪ್ರಕರಣ: ಮಗನಿಗೆ ಗಲ್ಲು, ತಂದೆಗೆ ಜೀವಾವಧಿ ಶಿಕ್ಷೆ

ಹಲ್ಯಾಣಿ:ಆಸ್ತಿ ವಿಷಯಕ್ಕೆ ನಾಲ್ವರ ಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 14 ಮೇ 2025, 0:20 IST
Last Updated 14 ಮೇ 2025, 0:20 IST
ಶ್ರೀಧರ ಭಟ್ಟ
ಶ್ರೀಧರ ಭಟ್ಟ   

ಕಾರವಾರ: ಆಸ್ತಿ ವಿಷಯಕ್ಕೆ ಮಗಳ ಪತಿಯ ಮನೆಯ ನಾಲ್ವರನ್ನು ಹತ್ಯೆಗೈದಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಭಟ್ಕಳ ತಾಲ್ಲೂಕು ಹಲ್ಯಾಣಿಯ ವಿನಯ ಭಟ್ಟ (40) ಎಂಬಾತನಿಗೆ ಮರಣ ದಂಡನೆ ಮತ್ತು ಆತನ ತಂದೆ ಶ್ರೀಧರ ಭಟ್ಟ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

2023ರ ಫೆಬ್ರುವರಿ 24ರಂದು ಭಟ್ಕಳ ತಾಲ್ಲೂಕಿನ ಓಣಿಬಾಗಿಲು ಗ್ರಾಮದ ಕೃಷಿಕ ಶಂಭು ಭಟ್ಟ (70), ಅವರ ಪತ್ನಿ ಮಾದೇವಿ (60), ಪುತ್ರ ರಾಘವೇಂದ್ರ ಯಾನೆ ರಾಜು ಭಟ್ (40) ಹಾಗೂ ಸೊಸೆ ಕುಸುಮಾ (35) ಎಂಬುವರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು. ಹತ್ಯೆಯಾದ ಶಂಭು ಭಟ್ಟ ಹಾಗೂ ಅಪರಾಧಿ ಶ್ರೀಧರ ಭಟ್ಟ ಬೀಗರಾಗಿದ್ದು, ಅಪರಾಧಿಯ ಪುತ್ರಿ ವಿದ್ಯಾ ಭಟ್ಟ ಪಾಲಿನ ಆಸ್ತಿ ಕಲಹದ ವಿಷಯಕ್ಕೆ ಹತ್ಯೆ ನಡೆದಿತ್ತು ಎಂಬುದು ಸಾಬೀತಾಗಿದೆ.

ಶಂಭು ಭಟ್ಟ, ಅವರ ಪುತ್ರ ರಾಜು ಮತ್ತು ಸೊಸೆ ಕುಸುಮಾ ಅವರನ್ನು ಹತ್ಯೆಗೈದ ವಿನಯ ಭಟ್ಟನಿಗೆ ಮರಣ ದಂಡನೆ ಶಿಕ್ಷೆ ಮತ್ತು ಮಾದೇವಿ ಅವರನ್ನು ಹತ್ಯೆಗೈದ ಶ್ರೀಧರ ಭಟ್ಟನಿಗೆ ಜೀವಾವಧಿ ಶಿಕ್ಷೆ ಹಾಗೂ ₹2.10 ಲಕ್ಷ ದಂಡ ವಿಧಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಅವರು ಆದೇಶಿಸಿದ್ದಾರೆ.

ADVERTISEMENT

ಹತ್ಯೆ ನಡೆದ ದಿನ ಮನೆಯೊಳಗೆ ಮಲಗಿದ್ದ ಸಣ್ಣ ಮಗು ಮತ್ತು ಪಕ್ಕದ ಮನೆಗೆ ಆಡಲು ಹೋಗಿದ್ದ ಇನ್ನೊಬ್ಬ ಮಗ ಪಾರಾಗಿದ್ದರು. ಇಬ್ಬರೂ ಮಕ್ಕಳು ಅನಾಥರಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕಿ ತನುಜಾ ಬಿ.ಹೊಸಪಟ್ಟಣ ವಾದ ಮಂಡಿಸಿದ್ದರು.

ವಿನಯ ಭಟ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.