ADVERTISEMENT

ವಾಸ್ಕೋವರೆಗೆ ‘ಮುರುಡೇಶ್ವರ ಎಕ್ಸ್‌ಪ್ರೆಸ್’: ಪ್ರಸ್ತಾವ

ಕೊಂಕಣ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 3:08 IST
Last Updated 12 ಸೆಪ್ಟೆಂಬರ್ 2025, 3:08 IST
ಗೋವಾದ ಮಡಗಾಂವ್‌ನಲ್ಲಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಧ್ಯಕ್ಷತೆಯಲ್ಲಿ ಕೊಂಕಣ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸಭೆ ನಡೆಯಿತು. ಕೊಂಕಣ ರೈಲ್ವೆ ಮುಖ್ಯ ಪ್ರಧಾನ ವ್ಯವಸ್ಥಾಪಕ ಸಂತೋಷ್ ಕುಮಾರ್ ಝಾ, ಇತರ ಪ್ರಮುಖರು ಪಾಲ್ಗೊಂಡಿದ್ದರು.
ಗೋವಾದ ಮಡಗಾಂವ್‌ನಲ್ಲಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಧ್ಯಕ್ಷತೆಯಲ್ಲಿ ಕೊಂಕಣ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸಭೆ ನಡೆಯಿತು. ಕೊಂಕಣ ರೈಲ್ವೆ ಮುಖ್ಯ ಪ್ರಧಾನ ವ್ಯವಸ್ಥಾಪಕ ಸಂತೋಷ್ ಕುಮಾರ್ ಝಾ, ಇತರ ಪ್ರಮುಖರು ಪಾಲ್ಗೊಂಡಿದ್ದರು.   

ಕಾರವಾರ: ಬೆಂಗಳೂರು–ಮುರುಡೇಶ್ವರ ನಡುವೆ ಸಂಚರಿಸುವ ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲನ್ನು ಗೋವಾದ ವಾಸ್ಕೋವರೆಗೆ ವಿಸ್ತರಿಸಲು ರೈಲ್ವೆ ಮಂಡಳಿಗೆ ಪ್ರಸ್ತಾವ ಸಲ್ಲಿಸಲು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ಗೋವಾದ ಮಡಗಾಂವ್‌ನಲ್ಲಿ ಗುರುವಾರ ನಡೆದ ಕೊಂಕಣ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಕರ್ನಾಟಕ, ಗೋವಾ, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳ ವ್ಯಾಪ್ತಿಯ ರೈಲ್ವೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸುವ ಜೊತೆಗೆ ಪ್ರಯಾಣಿಕರ ಬೇಡಿಕೆಗಳ ಬಗ್ಗೆಯೂ ವಿಸ್ತೃತ ಚರ್ಚೆ ನಡೆಯಿತು. ರಾಜ್ಯದ, ಅದರಲ್ಲಿಯೂ ಉತ್ತರ ಕನ್ನಡಕ್ಕೆ ಸಂಬಂಧಿಸಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಸಭೆಯ ನಿರ್ಣಯದ ಮಾಹಿತಿಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

‘ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ–ಮುರುಡೇಶ್ವರಕ್ಕೆ ಸಂಚರಿಸುವ ಮುರುಡೇಶ್ವರ ಎಕ್ಸ್‌ಪ್ರೆಸ್ (16585/86) ಕಾರವಾರದವರೆಗೆ ವಿಸ್ತರಿಸುವ ಬೇಡಿಕೆ ಇತ್ತು. ಸಭೆಯಲ್ಲಿ ಚರ್ಚಿಸಿದ್ದು ಜನರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಲು ವಾಸ್ಕೋವರೆಗೆ ವಿಸ್ತರಿಸಲು ಮಂಡಳಿಗೆ ಮರುಪ್ರಸ್ತಾವ ಸಲ್ಲಿಸಲು ನಿರ್ಣಯಿಸಲಾಯಿತು’ ಎಂದು ಮಾಹಿತಿ ನೀಡಿದರು.

ADVERTISEMENT

‘ಕಾರವಾರ–ಬೆಂಗಳೂರು ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ (16595/96) ರೈಲಿಗೆ ಈಗಿರುವ 19 ಬೋಗಿಗಳ ಜತೆಗೆ ಇನ್ನೂ 3 ಹೆಚ್ಚುವರಿ ಬೋಗಿಗಳನ್ನು ಸೇರಿಸಲು ರೈಲ್ವೆ ಮಂಡಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಸಭೆಗೆ ಸೂಚಿಸಲಾಯಿತು. ಜಿಲ್ಲೆಯ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲಕ್ಕೆ ಪ್ಲಾಟ್ ಫಾರ್ಮ್, ಶೆಲ್ಟರ್ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸಲು ಸೂಚಿಸಲಾಯಿತು’ ಎಂದರು.

ಕೊಂಕಣ ರೈಲ್ವೆಗೆ ಸಂಬಂಧಿಸಿದ ಮಾಹಿತಿಯನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುವ ಹೊಸ ಮೊಬೈಲ್ ಅಪ್ಲಿಕೇಶನ್ ‘ಕೆ.ಆರ್.ಮಿರರ್’ ನ್ನು ಸಂಸದ ಕಾಗೇರಿ ಬಿಡುಗಡೆ ಮಾಡಿದರು. ಈ ಆ್ಯಪ್ ಮೂಲಕ ಪ್ರಯಾಣಿಕರು ರೈಲುಗಳ ಸ್ಥಿತಿ, ವೇಳಾಪಟ್ಟಿ ಮತ್ತು ಇತರೆ ಸೇವೆಗಳ ಕುರಿತು ಮಾಹಿತಿ ಪಡೆಯಬಹುದು ಎಂದು ಕೊಂಕಣ ರೈಲ್ವೆ ತಿಳಿಸಿದೆ.

ಸಭೆಯಲ್ಲಿ ಕೊಂಕಣ ರೈಲ್ವೆ ಮುಖ್ಯ ಪ್ರಧಾನ ವ್ಯವಸ್ಥಾಪಕ ಸಂತೋಷ್ ಕುಮಾರ್ ಝಾ, ನಾಲ್ಕು ರಾಜ್ಯಗಳ 8ಕ್ಕೂ ಹೆಚ್ಚು ಸಂಸದರು ಪಾಲ್ಗೊಂಡಿದ್ದರು.

ಮೆಮು ರೈಲು ಪೆರ್ನೆಮ್‌ಗೆ ವಿಸ್ತರಣೆ

‘ಕಾರವಾರ-ಮಡಗಾಂವ್ ನಡುವೆ ಸಂಚರಿಸುವ ಮೆಮು ರೈಲನ್ನು ಗೋವಾದ ಪೆರ್ನಮ್‍ವರೆಗೆ ವಿಸ್ತರಿಸುವ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ. ಈ ವಿಸ್ತರಣೆಯು ಶೀಘ್ರದಲ್ಲೇ ಜಾರಿಗೆ ಬರಲಿದೆ. ರೈಲ್ವೆ ವಿಸ್ತರಣೆಯಿಂದ ಜಿಲ್ಲೆಯಿಂದ ಗೋವಾದ ವೆರ್ನಾ ಸೇರಿದಂತೆ ವಿವಿಧ ಕೈಗಾರಿಕೆ ಪ್ರದೇಶಗಳಿಗೆ ಉದ್ಯೋಗದ ಸಲುವಾಗಿ ತೆರಳುವ ನೂರಾರು ಜನರಿಗೆ ಅನುಕೂಲ ಆಗಲಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.