ADVERTISEMENT

ಮುರುಡೇಶ್ವರ ಕಡಲ ತೀರದಲ್ಲಿ ತ್ಯಾಜ್ಯ: ಕ್ರಮಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 15:48 IST
Last Updated 4 ನವೆಂಬರ್ 2022, 15:48 IST
ಮುರುಡೇಶ್ವರ ಕಡಲತೀರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಗೂಡಂಗಡಿಗಳ ವರ್ತಕರಿಗೆ ನಿರ್ದೇಶನ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ನೇತೃತ್ವದಲ್ಲಿ ಮೀನುಗಾರರು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು
ಮುರುಡೇಶ್ವರ ಕಡಲತೀರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಗೂಡಂಗಡಿಗಳ ವರ್ತಕರಿಗೆ ನಿರ್ದೇಶನ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ನೇತೃತ್ವದಲ್ಲಿ ಮೀನುಗಾರರು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು   

ಕಾರವಾರ: ಮುರುಡೇಶ್ವರ ಕಡಲತೀರದಲ್ಲಿರುವ ಗೂಡಂಗಡಿಗಳ ವರ್ತಕರು, ತ್ಯಾಜ್ಯವನ್ನು ಅಲ್ಲಲ್ಲೇ ಎಸೆಯುತ್ತಿದ್ದಾರೆ. ಇದರಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಕಡಲತೀರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಸ್ಥಳೀಯ ಮೀನುಗಾರರು, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.

ಮುರುಡೇಶ್ವರ, ಮಾವಳ್ಳಿ ಮತ್ತು ದೇವಳ್ಳಿ ಭಾಗದ ಮೀನುಗಾರರು ಗಣಪತಿ ಉಳ್ವೇಕರ್ ಅವರಿಗೆ ಪತ್ರ ಬರೆದಿದ್ದರು. ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಬಳಿಗೆ ನಿಯೋಗ ತೆರಳಿ ಅಹವಾಲು ಸಲ್ಲಿಸಲಾಯಿತು.

ಕಡಲತೀರದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್, ದ್ರವ ತ್ಯಾಜ್ಯ, ಕಸಕಡ್ಡಿಗಳನ್ನು ಬಿಸಾಡಲಾಗುತ್ತಿದೆ. ಇದರಿಂದ ಕಡಲ ತೀರಕ್ಕೆ ಬರುವ ಪ್ರವಾಸಿಗರಿಗೆ ಅಸಹನೀಯ ವಾತಾವರಣ ಉಂಟಾಗುತ್ತಿದೆ. ಜಗತ್ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮುರುಡೇಶ್ವರವು ಅನೈರ್ಮಲ್ಯದಿಂದ ಕೂಡಿರುವುದನ್ನು ಕಂಡು ಬಹಳ ಬೇಸರಿಸಿಕೊಳ್ಳುತ್ತಿದ್ದಾರೆ. ಕೆಲವು ಅಂಗಡಿಕಾರರು ವಹಿವಾಟು ಮುಗಿಸಿ ರಾತ್ರಿ ಮನೆಗೆ ತೆರಳುವ ಮೊದಲು ಕಡಲತೀರದಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಾಕುತ್ತಿರುವ ಬಗ್ಗೆಯೂ ದೂರುಗಳಿವೆ ಎಂದು ಗಮನ ಸೆಳೆದರು.

ADVERTISEMENT

ಸಾರ್ವಜನಿಕರು ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಕಡಲ ತೀರದಲ್ಲಿ ತ್ಯಾಜ್ಯವನ್ನು ಬಿಸಾಡದಂತೆ, ಕಡಲ ತೀರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಗಣಪತಿ ಉಳ್ವೇಕರ್ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.