ADVERTISEMENT

ಅಂಕೋಲಾ | ನಾಗವರ್ಮ ಅರಸನ ಶಾಸನ ಪತ್ತೆ

ಅಚವೆ ಸಮೀಪದ ಅಂಗಡಿಬೈಲ್ ಗ್ರಾಮದ ಭಂಡಾರಿಗದ್ದೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 11:06 IST
Last Updated 8 ಆಗಸ್ಟ್ 2020, 11:06 IST
ಅಂಕೋಲಾ ತಾಲ್ಲೂಕಿನ ಅಚವೆ ಸಮೀಪದ ಅಂಗಡಿಬೈಲ್ ಗ್ರಾಮದ ಭಂಡಾರಿಗದ್ದೆಯಲ್ಲಿ ಪತ್ತೆಯಾದ ಶಾಸನವನ್ನು ಶ್ಯಾಮಸುಂದರ ಗೌಡ ಪರಿಶೀಲಿಸುತ್ತಿರುವುದು
ಅಂಕೋಲಾ ತಾಲ್ಲೂಕಿನ ಅಚವೆ ಸಮೀಪದ ಅಂಗಡಿಬೈಲ್ ಗ್ರಾಮದ ಭಂಡಾರಿಗದ್ದೆಯಲ್ಲಿ ಪತ್ತೆಯಾದ ಶಾಸನವನ್ನು ಶ್ಯಾಮಸುಂದರ ಗೌಡ ಪರಿಶೀಲಿಸುತ್ತಿರುವುದು   

ಅಂಕೋಲಾ: ತಾಲ್ಲೂಕಿನ ಅಚವೆ ಸಮೀಪದ ಅಂಗಡಿಬೈಲ್ ಗ್ರಾಮದ ಭಂಡಾರಿಗದ್ದೆಯಲ್ಲಿ ನಾಗವರ್ಮ ಅರಸನ ಅಪ್ರಕಟಿತ ಶಾಸನವೊಂದು ಈಚೆಗೆ ಪತ್ತೆಯಾಗಿದೆ. ಇಲ್ಲಿನ ಚಂದ್ರಕಾಂತ ಆಚಾರಿ ಎಂಬುವವರ ಮನೆಯ ಎದುರಿನ ಮಾವಿನ ಮರದ ಕೆಳಗೆ ಇದು ಕಂಡುಬಂದಿದೆ.

ಮನೆಯವರು ಈ ಶಾಸನವನ್ನು ನಿತ್ಯವೂ ಪೂಜೆ ಮಾಡುತ್ತಿದ್ದಾರೆ. ಇದರ ಬಗ್ಗೆ ಕುತೂಹಲಗೊಂಡು ಪರಿಶೀಲಿಸಿದ ಇತಿಹಾಸ ಸಂಶೋಧಕ ಅಂಕೋಲಾದ ಶ್ಯಾಮಸುಂದರ ಗೌಡ, ಶಿಲ್ಪದ ಮೇಲೆ ಶಾಸನವಿರುವುದನ್ನು ಗುರುತಿಸಿದರು. ಈ ಬಗ್ಗೆ ಅಧ್ಯಯನ ಮಾಡಿದಾಗ ಇದು ತುಂಡಾದ ವೀರಗಲ್ಲು ಶಾಸನದ ಭಾಗವಾಗಿದೆ ಎಂದು ಕಂಡುಕೊಂಡರು.

‘ಭಂಡಾರಿಗದ್ದೆಯಲ್ಲಿ ದೊರೆತ ಶಾಸನದಲ್ಲಿ ಕೇವಲ ಮೂರು ಸಾಲುಗಳ ವಾಕ್ಯಗಳಿವೆ. ಆದರೆ, ಈ ಹಿಂದೆ ದೊರೆತ ಶಾಸನಗಳು ತಿಳಿಸದ, ನಾಗವರ್ಮ ಅರಸನ ಬಿರುದುಗಳನ್ನು ನಮಗೆ ತಿಳಿಸುತ್ತದೆ. ಶಾಸನಕಾರನು ನಾಗವರ್ಮ ಅರಸನನ್ನು ‘ಸಮಸ್ತ ಗುಣಗಣಳೀಕ್ರಿತಮಪ್ಪ’ ಎಂದು ಕೊಂಡಾಡಿದ್ದಾನೆ. ಇದರಿಂದ ನಾಗವರ್ಮ ಅರಸನು ಸಕಲ ಸದ್ಗುಣಗಳ ಆಗರವಾಗಿದ್ದ ಒಬ್ಬ ಒಳ್ಳೆಯ ಆಡಳಿತಗಾರ, ಶೂರ ಧೀರನಾಗಿದ್ದ ಎಂದು ಅರ್ಥೈಸಬಹುದು’ ಎಂದು ವಿವರಿಸಿದರು.

ADVERTISEMENT

‘ಶಾಸನದಲ್ಲಿ ಆತನನ್ನು ‘ಧರ್ಮಸುಮೇರು’, ‘ಪರನಾರೀಪುತ್ರ’, ‘ಕೋಕರಕ್ಷಪಾಲಕಂ’ ಎಂದೂ ಕರೆಯಲಾಗಿದೆ. ಶಾಸನದಲ್ಲಿ ಐದು ಅಂತಸ್ತುಗಳಿದ್ದು, ಮೂರು ಸುಂದರ ಮಂಟಪಗಳನ್ನು ಚಿತ್ರಿಸಲಾಗಿದೆ. ಮಧ್ಯದ ಮಂಟಪದಲ್ಲಿ ಶಿವಲಿಂಗವಿದ್ದು ಅದನ್ನು ಪೂಜಿಸುವ ಯತಿ ಮತ್ತು ಲಿಂಗದ ಎದುರಿಗೆ ಕೈಮುಗಿದು ನಿಂತ ವೀರನನ್ನು ಚಿತ್ರಿಸಲಾಗಿದೆ. ಶಿಲೆಯ ಬಲಭಾಗದ ಮಂಟಪದಲ್ಲಿ ಗಣಪತಿ, ಷಣ್ಮುಖ ಮತ್ತು ನಂದಿಯನ್ನು ಕೆತ್ತಲಾಗಿದೆ. ಎಡಭಾಗದ ಮಂಟಪದಲ್ಲಿ ಕರುವಿಗೆ ಹಾಲುಣಿಸುತ್ತಿರುವ ಆಕಳಿನ ಚಿತ್ರಣವಿದೆ.

‘ಆ ಕಾಲದಲ್ಲಿ ಅಂಗಡಿಬೈಲ್ ಭಂಡಾರಿಗದ್ದೆಯಲ್ಲಿ ಶಿವ, ಗಣಪತಿ ಮತ್ತು ಷಣ್ಮುಖರ ದೇವಾಲಯ ಇದ್ದ ಸುಳಿವನ್ನು ನೀಡುತ್ತದೆ. ಶಿಲ್ಪಿಯು ಬೋಧಿಗೆಯೊಂದಿಗೆ ಚಿತ್ರಿಸಿದ್ದನ್ನು ನೋಡಿದರೆ ಈ ಮಂಟಪಗಳ ರಚನೆಗೆ ಆತ ದೇವಾಲಯದಿಂದ ಸ್ಫೂರ್ತಿ ಪಡೆದದ್ದು ಸ್ವಷ್ಟವಾಗುತ್ತದೆ. ಇದಕ್ಕೆ ಪುಷ್ಠಿಕೊಡುವಂತೆ ಶಾಸನ ದೊರೆತ ಸ್ಥಳದಿಂದ ಸುಮಾರು 600 ಮೀಟರ್ ದೂರದಲ್ಲಿ ಈಗ ಜೀರ್ಣೋದ್ಧಾರವಾದ ಪ್ರಾಚೀನ ಶಿವಾಲಯವಿದೆ. ಅದರ ಪರಿಸರದಲ್ಲಿ ಸುಂದರ ಕೆತ್ತನೆಯ ಹಳೆಯ ಶಿಲಾಕಂಬಗಳ ಅವಶೇಷಗಳೂ ಇವೆ’ ಎಂದು ಅವರು ವಿಶ್ಲೇಷಿಸಿದರು.

‘ಗೋಕರ್ಣ ಪುರವರಾಧೀಶ್ವರ’:ನಾಗವರ್ಮ ಅರಸ ಕ್ರಿಸ್ತಶಕ 1070ರಿಂದ 1113ರವರೆಗೆ ಗೋಕರ್ಣವನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯಭಾರ ಮಾಡಿದ್ದ. ಈಗಿನ ಹೊನ್ನಾವರ, ಕುಮಟಾ, ಅಂಕೋಲಾ, ಶಿರಸಿ, ಸಿದ್ದಾಪುರ ತಾಲ್ಲೂಕುಗಳ ಭಾಗಗಳು ಆತನ ಹಿಡಿತದಲ್ಲಿದ್ದವು.

ಈ ಹಿಂದೆ ಹೊನ್ನಾವರ ತಾಲ್ಲೂಕಿನ ಕೆಕ್ಕಾರ, ಹಳದೀಪುರ, ಕಡಬಾಳ, ಅಂಕೋಲಾ ತಾಲೂಕಿನ ಬಡಗೇರಿ, ಹಾವೇರಿ ಜಿಲ್ಲೆಯ ಗಳಗನಾಥ ಮೊದಲಾದೆಡೆ ದೊರೆತ ಶಾಸನಗಳಲ್ಲಿ ನಾಗವರ್ಮ ಅರಸನ ಉಲ್ಲೇಖವಿದೆ. ಹಳದಿಪುರದ ಶಾಸನದಲ್ಲಿ ಆತನನ್ನು ‘ಗೋಕರ್ಣ ಪುರವರಾಧೀಶ್ವರ’ ಎಂದು ಉಲ್ಲೇಖಿಸಲಾಗಿದೆ ಎಂದು ಶ್ಯಾಮಸುಂದರ ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.