ADVERTISEMENT

ಶಿರಸಿ: ಕೃಷಿ ಆಸಕ್ತಿ ಉತ್ತೇಜಿಸುವ ‘ನಾಟಿ ಹಬ್ಬ’

ಯುವಕ-ಯುವತಿಯರಿಂದ ಭತ್ತದ ಗದ್ದೆಯಲ್ಲಿ ನಾಟಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 6:30 IST
Last Updated 2 ಆಗಸ್ಟ್ 2025, 6:30 IST
ಶಿರಸಿಯ ಉಂಚಳ್ಳಿ ತುಡ್ವಿ ಮನೆಯಲ್ಲಿ ನಾಟಿ ಹಬ್ಬದಲ್ಲಿ ಭತ್ತದ ಸಸಿ ನಾಟಿ ಮಾಡಲಾಯಿತು
ಶಿರಸಿಯ ಉಂಚಳ್ಳಿ ತುಡ್ವಿ ಮನೆಯಲ್ಲಿ ನಾಟಿ ಹಬ್ಬದಲ್ಲಿ ಭತ್ತದ ಸಸಿ ನಾಟಿ ಮಾಡಲಾಯಿತು   

ಶಿರಸಿ: ಯುವ ಪೀಳಿಗೆಯಲ್ಲಿ ಕೃಷಿಯೆಡೆ ಆಸಕ್ತಿ ಬೆಳೆಸುವ ಮತ್ತು ಸಾಂಪ್ರದಾಯಿಕ ಭತ್ತದ ತಳಿ ಉಳಿಸಲು ಉತ್ತೇಜಿಸುವ ಸಲುವಾಗಿ ಇಲ್ಲಿನ ಸ್ಕೊಡ್‌ವೆಸ್ ಸಂಸ್ಥೆ ಹಮ್ಮಿಕೊಂಡಿದ್ದ ನಾಟಿ ಹಬ್ಬ ತಾಲ್ಲೂಕಿನ ಉಂಚಳ್ಳಿಯ ತುಡ್ವಿ ಮನೆಯಲ್ಲಿ ಶುಕ್ರವಾರ ನಡೆಯಿತು. ಇದುವರೆಗೂ ಹೊಲಕ್ಕಿಳಿಯದ ಅನೇಕ ಯುವಕ-ಯುವತಿಯರು ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಸಂಭ್ರಮಿಸಿದರು.

ಕಾಲ ಬದಲಾಗಿದೆ, ಕೃಷಿ ವಿಧಾನಗಳೂ ಬದಲಾಗಿವೆ. ಆದರೆ, ಹಿಂದಿನ ಕೃಷಿ ಪದ್ಧತಿ ಯಾವ ರೀತಿ ಇರುತ್ತಿತ್ತು ಎಂಬುದನ್ನು ಕಾರ್ಯಕ್ರಮದಲ್ಲಿ ಯುವ ಜನತೆಗೆ ಪರಿಚಯಿಸಲಾಯಿತು. ನಂತರ ಅಳಿವಿನಂಚಿನಲ್ಲಿನ ಬೀಜಗಳ ಪ್ರದರ್ಶನ ಹಾಗೂ ಮಾಹಿತಿ, ಸಮಗ್ರ ಕೃಷಿ ಚಟುವಟಿಕೆಗಳ ಪ್ರಾತ್ಯಕ್ಷಿಕೆ, ಮಹಿಳೆಯರಿಂದ ಜೇನು ಕೃಷಿ, ಜೈವಿಕ ಸಂಪನ್ಮೂಲ ಕೇಂದ್ರದ ಪರಿಚಯ,  ಕೃಷಿಯಾಧಾರಿತ ಅರಣ್ಯೀಕರಣದ ಪ್ರಾತ್ಯಕ್ಷಿಕೆಗಳು ನಡೆದವು. ಕೊನೆಯಲ್ಲಿ ಬಂದವರೆಲ್ಲ ತಂಡವಾಗಿ ಭತ್ತದ ಗದ್ದೆಗೆ ತೆರಳಿ ನಾಟಿ ಕಾರ್ಯ ನೆರವೇರಿಸಿದರು.

ಸ್ಕೊಡ್‌ವೆಸ್ ಸಂಸ್ಥೆಯ ವೆಂಕಟೇಶ ನಾಯ್ಕ ಮಾತನಾಡಿ, ವಿವಿಧ ಹಳ್ಳಿಗಳಿಂದ ರೈತರು, ಸ್ವ ಸಹಾಯ ಸಂಘಗಳು, ಪ್ರಗತಿಪರ ರೈತರು ನಾಟಿ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಸಂಸ್ಥೆ ಈಗಾಗಲೇ ಹಲವು ಅಪರೂಪದ ತಳಿಗಳ ಭತ್ತದ ತಳಿಗಳನ್ನು ಉಂಚಳ್ಳಿಯಲ್ಲಿ ಬೆಳೆಯುತ್ತಿದೆ. ಈ ತಳಿಯ ಗಿಡಗಳನ್ನೇ ನಾಟಿ ಹಬ್ಬದಲ್ಲಿ ನಾಟಿ ಮಾಡಲಾಗಿದೆ. ಮೈಸೂರು ಕಗ್ಗ, ಗಜಮಿನಿ, ಶೋಭಿನಿ, ರಾಜಮುಡಿ, ಮಂಜುಗುಣಿ ಸಣ್ಣದಂಥ ತಳಿಗಳನ್ನು ನಾವು ನಾಟಿ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಈ ಬೀಜಗಳ ಸಂರಕ್ಷಣೆ ಸಲುವಾಗಿ ರೈತರಿಗೆ ವಿತರಣೆ ಮಾಡಲಿದ್ದೇವೆ. ರೈತರು ಈ ತಳಿಗಳನ್ನು ಅಭಿವೃದ್ಧಿಪಡಿಸಿದ ಬಳಿಕ ಸ್ಕೊಡ್‍ವೆಸ್ ಸಂಸ್ಥೆಯೇ ಪುನಃ ಖರೀದಿಸಲಿದೆ ಎಂದರು.

ADVERTISEMENT

ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ, ಡಿಎಸ್ಪಿ ಗೀತಾ ಪಾಟೀಲ ತುಡ್ವಿ ಮನೆ ಆವಾರದಲ್ಲಿ ಗಿಡ ನಾಟಿ ಮಾಡಿದರು. ನಂತರ ನಾಟಿ ಕಾರ್ಯದಲ್ಲೂ ಭಾಗವಹಿಸಿದರು. ಅರಣ್ಯ ಕಾಲೇಜ್ ಡೀನ್ ಆರ್.ವಾಸುದೇವ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ರೂಪಾ ಪಾಟೀಲ, ಪ್ರಮುಖರಾದ ಕೆ.ವಿ.ಖೂರ್ಸೆ, ಕೆ.ಎನ್.ಹೊಸ್ಮನಿ, ಸರಸ್ವತಿ ಎನ್. ರವಿ, ಶಿವಪ್ರಸಾದ ಗಾಂವ್ಕರ, ವಿಶ್ವೇಶ್ವರ ಭಟ್, ಎಚ್.ನಟರಾಜ, ಮಧುಕರ ನಾಯ್ಕ, ಶಶಿಕಾಂತ ವರ್ಮ ಇತರರಿದ್ದರು.

ಅಗೆಪೂಜೆ ಗೋಗ್ರಾಸ ಅರ್ಪಣೆ

ನಾಟಿ ಹಬ್ಬಕ್ಕೆ ಪೂರಕವಾಗಿ ಅಗೆಪೂಜೆ ಗೋಗ್ರಾಸ ಅರ್ಪಣೆ ಆಯೋಜಿಸಿದ್ದ ಸಂಸ್ಥೆ ಕೃಷಿ ಸಾಂಪ್ರದಾಯಿಕತೆಗೆ ಒತ್ತು ಕೊಟ್ಟಿತ್ತು. ಜತೆ ಇಲ್ಲಿ ಕೃಷಿಯ ಆಧುನಿಕರಣವನ್ನೂ ಕಾಣಬಹುದಿತ್ತು. ಸಾಂಪ್ರದಾಯಿಕ ಮತ್ತು ಯಾಂತ್ರಿಕ ಕೃಷಿ ಪರಿಚಯಿಸುತ್ತಲೇ ಯುವಜನರಲ್ಲಿ ಕೃಷಿ ಕಾಯಕದ ಮಹತ್ವ ಮತ್ತು ಸೊಗಸು ಪರಿಚಯಿಸಲಾಯಿತು. ನೂರಾರು ಜನರು ಪಾಲ್ಗೊಂಡು ಈ ನಾಟಿ ಹಬ್ಬವನ್ನು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.