ADVERTISEMENT

ಶಿರಸಿ: ಮಾರಿಕಾಂಬಾ ದೇಗುಲಕ್ಕೆ ಭಕ್ತರ ದಂಡು

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 5:25 IST
Last Updated 27 ಸೆಪ್ಟೆಂಬರ್ 2025, 5:25 IST
ಶರನ್ನವರಾತ್ರಿ ಅಂಗವಾಗಿ ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ಕಂಡ ಭಕ್ತರ ದಂಡು 
ಶರನ್ನವರಾತ್ರಿ ಅಂಗವಾಗಿ ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ಕಂಡ ಭಕ್ತರ ದಂಡು    

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಾಲಯದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಸಡಗರ ದಿನದಿಂದ ದಿನಕ್ಕೆ  ಹೆಚ್ಚುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಜನಮನ ಸೂರೆಗೊಂಡಿವೆ.

ದೇವಿಯ ವಾರವಾದ ಶುಕ್ರವಾರ ದೇವಾಲಯದಲ್ಲಿ ಭಕ್ತರು ತುಂಬಿ ತುಳುಕಿದರು. ಬೆಳಿಗ್ಗೆಯಿಂದ ರಾತ್ರಿಯತನಕ ಅಸಂಖ್ಯ ಭಕ್ತರು ದೇವಿಯ ದರ್ಶನ ಪಡೆದರು. ಗರ್ಭಗುಡಿ, ಹೊರ ಆವರಣಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. 

ದೇವಿಯ ಆರಾಧನೆಯ ಸಂದರ್ಭವಾದ ಶರನ್ನವರಾತ್ರಿಯ ಹಿನ್ನೆಲೆಯಲ್ಲಿ ದೇಗುಲ ದ್ವಾರ, ಸಭಾಮಂಟಪ ಆವಾರದ ದ್ವಾರ ಹಾಗೂ ಗರ್ಭಗುಡಿಯ ಅಲಂಕಾರ ಕಂಗೊಳಿಸುತ್ತಿದೆ. ಮುಖ್ಯದ್ವಾರ ಹಾಗೂ ಗರ್ಭಗುಡಿಯ ದ್ವಾರದಲ್ಲಿ ಮಂಟಪ ನಿರ್ಮಿಸಲಾಗಿದೆ. ದೇವಿಯು ವಿವಿಧ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದು, ಬೆಳಿಗ್ಗೆಯಿಂದಲೇ ಭಕ್ತರು ಬಂದು ಹಣ್ಣುಕಾಯಿ, ಉಡಿ ಸೇವೆ ಸಮರ್ಪಿಸುತ್ತಿದ್ದಾರೆ.

ಭಟ್ಕಳ, ಕುಂದಾಪುರ, ಹುಬ್ಬಳ್ಳಿ ಭಾಗದಿಂದಲೂ ಭಕ್ತರು ಆಗಮಿಸಿದ್ದರು. ಶುಭ ಶುಕ್ರವಾರದಂದು ನಟ ಶಿವರಾಜ್‌ಕುಮಾರ್‌ ದಂಪತಿ, ಶಾಸಕ ವಿ.ಸುನೀಲಕುಮಾರ ದೇವಿಯ ದರ್ಶನ ಪಡೆದರು. ಮಾರಿಕಾಂಬಾ ಭಜನಾ ಮಂಡಳಿಯವರು ಬೆಳಿಗ್ಗೆಯಿಂದ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ರಾತ್ರಿ ಮಹಾಮಂಗಳಾರತಿ ನಡೆದ ನಂತರ ಪ್ರಸಾದ ವಿತರಣೆ ನಡೆಯಿತು. ನವರಾತ್ರಿ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಅಂಬಾಗಿರಿಯ ಕಾಳಿಕಾ ಭವಾನಿ ದೇವಸ್ಥಾನ, ಬನವಾಸಿಯ ಮಾರಿಕಾಂಬಾ ದೇವಸ್ಥಾನ, ದೇವಿಮನೆ ದೇವಸ್ಥಾನ, ಮಣ್ಮನೆಯ ಮಾರಿಕಾಂಬಾ ದೇವಸ್ಥಾನ, ಸ್ವರ್ಣವಲ್ಲಿ ಮಠ, ಸ್ವಾದಿ ದಿಗಂಬರ ಜೈನ ಮಠ, ವಾದಿರಾಜ ಮಠ ಸೇರಿದಂತೆ ವಿವಿಧೆಡೆಗಳಲ್ಲಿ ಉತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.