ADVERTISEMENT

ಕಾರವಾರ: ಚಿಕಿತ್ಸೆಗೆ ನೌಕಾದಳದ ಆಸ್ಪತ್ರೆಗಳು ಸಜ್ಜು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 15:51 IST
Last Updated 29 ಏಪ್ರಿಲ್ 2021, 15:51 IST
ನೌಕಾದಳದ ಆಸ್ಪತ್ರೆಯೊಂದರ ದೃಶ್ಯ
ನೌಕಾದಳದ ಆಸ್ಪತ್ರೆಯೊಂದರ ದೃಶ್ಯ   

ಕಾರವಾರ: ಕೋವಿಡ್ ಪೀಡಿತ ಸಾರ್ವಜನಿಕರ ಚಿಕಿತ್ಸೆಗೆ ನೌಕಾದಳದ ಪಶ್ಚಿಮ ಕಮಾಂಡ್‌ನ ಮೂರು ಆಸ್ಪತ್ರೆಗಳಲ್ಲಿ ಅವಕಾಶ ನೀಡಲಾಗಿದೆ. ಇದರಲ್ಲಿ ಕಾರವಾರದ ಐ.ಎನ್‌.ಎಚ್‌.ಎಸ್ ಪತಂಜಲಿ ಆಸ್ಪತ್ರೆಯೂ ಸೇರಿದೆ.

ದೇಶದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಂಭೀರವಾಗಿ ಸೋಂಕಿತರಾಗಿರುವವರ ಚಿಕಿತ್ಸೆಗೆ ಹೆಚ್ಚಿನ ಸೌಲಭ್ಯಗಳ ಅಗತ್ಯವಿದೆ. ಇದನ್ನು ಮನಗಂಡು ಸ್ಥಳೀಯ ಆಡಳಿತಗಳಿಗೆ ನೌಕಾದಳದ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಗೋವಾದ ಐ.ಎನ್.ಎಚ್.ಎಸ್ ಜೀವಂತಿ, ಮುಂಬೈನ ಐ.ಎನ್.ಎಚ್.ಎಸ್ ಸಂಧಾನಿ ಆಸ್ಪತ್ರೆಗಳು ಕೂಡ ಸಾರ್ವಜನಿಕರ ಚಿಕಿತ್ಸೆಗೆ ಲಭಿಸುವಂತೆ ಮಾಡಲಾಗಿದೆ.

ಮುಂಬೈನಲ್ಲಿ ನೌಕಾನೆಲೆಯ ಸಮೀಪದಲ್ಲೇ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗಿದೆ. ಈ ಮೂಲಕ ಸೋಂಕಿತ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಚಿಕಿತ್ಸೆಗಾಗಿ ಹೋಗುವುದನ್ನು ತಡೆಯಲು ಉದ್ದೇಶಿಸಲಾಗಿದೆ. ನೌಕಾದಳದ ಅಧಿಕಾರಿಗಳು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ADVERTISEMENT

ಕಾರವಾರದಲ್ಲಿ ನೌಕಾದಳದ ಅಧಿಕಾರಿಗಳು ಸುಮಾರು 1,500 ವಲಸೆ ಕಾರ್ಮಿಕರಿಗೆ ಜೀವನೋಪಾಯ ವಸ್ತುಗಳ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಐ.ಎನ್.ಎಚ್.ಎಸ್ ಪತಂಜಲಿ ಆಸ್ಪತ್ರೆಯು ಅಗತ್ಯವಿದ್ದರೆ ಸೋಂಕಿತ ಸಾರ್ವಜನಿಕರ ಚಿಕಿತ್ಸೆಗೆ ಸಿದ್ಧವಾಗಿದೆ.

ಗೋವಾದಲ್ಲಿ ನೌಕಾದಳದ ತಂಡಗಳು ಸಾಮುದಾಯಿಕ ಅಡುಗೆ ಮನೆಗಳನ್ನು ಈ ಹಿಂದೆ ಸಿದ್ಧಪಡಿಸಿದ್ದವು. ಅವುಗಳನ್ನು ಈ ಬಾರಿಯೂ ಅಗತ್ಯಕ್ಕೆ ಸರಿಯಾಗಿ ಬಳಕೆ ಮಾಡಿಕೊಳ್ಳಲಾಗುವುದು. ಐ.ಎನ್.ಎಚ್.ಎಸ್ ಜೀವಂತಿ ಆಸ್ಪತ್ರೆಯಲ್ಲಿ ಆಮ್ಲಜನಕ ಸಹಿತ ಕೆಲವು ಹಾಸಿಗೆಗಳಿದ್ದು, ಅವುಗಳನ್ನು ಸಾರ್ವಜನಿಕರ ಬಳಕೆಗೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.