ADVERTISEMENT

ಹದಗೆಟ್ಟ ಉಲ್ಲಾಳ ರಸ್ತೆ:ದುರಸ್ಥಿಗೆ ನಿರ್ಲಕ್ಷ

ಮೂರು ತಾಲ್ಲೂಕು ಜೋಡಿಸುವ ಮುಖ್ಯ ಸಂಪರ್ಕ ರಸ್ತೆ

ಗಣಪತಿ ಹೆಗಡೆ
Published 9 ಮೇ 2022, 15:52 IST
Last Updated 9 ಮೇ 2022, 15:52 IST
ಬಿಸಲಕೊಪ್ಪ–ಉಲ್ಲಾಳ ನಡುವಿನ ಸಂಪರ್ಕ ರಸ್ತೆಯ ಡಾಂಬರು ಕಿತ್ತು ಹೋಗಿದ್ದು ಅಲ್ಲಲ್ಲಿ ಹೊಂಡಗಳಿವೆ.
ಬಿಸಲಕೊಪ್ಪ–ಉಲ್ಲಾಳ ನಡುವಿನ ಸಂಪರ್ಕ ರಸ್ತೆಯ ಡಾಂಬರು ಕಿತ್ತು ಹೋಗಿದ್ದು ಅಲ್ಲಲ್ಲಿ ಹೊಂಡಗಳಿವೆ.   

ಶಿರಸಿ: ಯಲ್ಲಾಪುರ–ಮುಂಡಗೋಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ತಾಲ್ಲೂಕಿನ ಬಿಸಲಕೊಪ್ಪ–ಉಲ್ಲಾಳ ಸಂಪರ್ಕ ರಸ್ತೆ ಹದಗೆಟ್ಟ ಸ್ಥಿತಿಯಲ್ಲಿದೆ. ಮರುಡಾಂಬರೀಕರಣ ಮಾಡುವಂತೆ ಒತ್ತಾಯಿಸಿದ್ದ ಗ್ರಾಮಸ್ಥರ ಕೂಗಿಗೆ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪಗಳಿವೆ.

ಸುಮಾರು 4 ಕಿ.ಮೀ. ಉದ್ದದ ಈ ರಸ್ತೆಯಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳಿವೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ. ಶಿರಸಿಗೆ ಯಲ್ಲಾಪುರ ಮತ್ತು ಮುಂಡಗೋಡ ತಾಲ್ಲೂಕುಗಳನ್ನು ಜೋಡಿಸುವ ಮುಖ್ಯ ರಸ್ತೆಯಲ್ಲಿ ಈಗ ಸಂಚಾರಕ್ಕೆ ಸ್ಥಳೀಯರೇ ಹಿಂದೇಟು ಹಾಕುವ ಸ್ಥಿತಿ ಇದೆ.

ಕಳೆದ ವರ್ಷ ಸುರಿದ ಅತಿವೃಷ್ಟಿಯ ಪರಿಣಾಮ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಹೊಂಡಗಳೇ ತುಂಬಿರುವ ಮಾರ್ಗದಲ್ಲಿ ರಸ್ತೆ ಹುಡುಕುವುದೇ ಸವಾಲಿನ ಕೆಲಸವಾಗಿದೆ ಎಂಬುದು ವಾಹನ ಸವಾರರ ಮಾತು.

ADVERTISEMENT

ಬಿಸಲಕೊಪ್ಪ, ಕೊಪ್ಪ, ಉಲ್ಲಾಳ, ಕೊಪ್ಪದಗದ್ದೆ ಸೇರಿ ಹಲವು ಗ್ರಾಮಗಳ ಜನರಿಗೆ ಸಂಚಾರಕ್ಕೆ ಇರುವ ಏಕೈಕ ಮಾರ್ಗ ಇದಾಗಿದೆ. ನಿರಂತರವಾಗಿ ಮಳೆ ಸುರಿದರೆ ಹೊಂಡಗಳಲ್ಲಿ ನೀರು ನಿಂತು ವಾಹನಗಳು ಸಾಗಲು ಸಮಸ್ಯೆ ಆಗುತ್ತಿದೆ ಎಂಬುದು ಸ್ಥಳೀಯರ ದೂರು.

‘ಮೂರ್ನಾಲ್ಕು ವರ್ಷದಿಂದ ರಸ್ತೆ ಹಾಳಾದ ಸ್ಥಿತಿಯಲ್ಲೇ ಇದೆ. ಬೆಡಸಗಾಂವದಿಂದ ಉಲ್ಲಾಳದವರೆಗೆ ರಸ್ತೆ ದುರಸ್ಥಿಯಾಗಿದೆ. ಆದರೆ ಅದರ ನಂತರದ ಶಿರಸಿ ತಾಲ್ಲೂಕಿಗೆ ಸೇರಿದ ಭಾಗದಲ್ಲಿ ಮಾತ್ರ ದುರಸ್ಥಿ ಕಾರ್ಯವೇ ನಡೆದಿಲ್ಲ’ ಎನ್ನುತ್ತಾರೆ ಸ್ಥಳೀಯ ಮನೋಜ್ ನಾಯ್ಕ.

‘ಬಿಸಲಕೊಪ್ಪ, ಉಲ್ಲಾಳ ಭಾಗದ ಜನರು ಇದೇ ರಸ್ತೆ ಅವಲಂಭಿಸಿದ್ದು ಕೃಷಿ ಬೆಳೆಗಳನ್ನು ಸಾಗಿಸಲು ತೊಂದರೆಪಟ್ಟಿದ್ದಾರೆ. ವಿದ್ಯಾರ್ಥಿಗಳಿಗೂ ತೊಂದರೆಗಳಾಗಿವೆ. ಬಾಡಿಗೆ ವಾಹನಗಳು ಇಲ್ಲಿ ಓಡಾಟ ನಡೆಸಲು ಹಿಂದೇಟು ಹಾಕುತ್ತಿವೆ’ ಎನ್ನುತ್ತಾರೆ ಸ್ಥಳೀಯರಾದ ಶೇಷಗಿರಿ ಹೆಗಡೆ.

‘ಅತಿವೃಷ್ಟಿ ಪರಿಹಾರ ಅನುದಾನದಲ್ಲಿ ರಸ್ತೆ ದುರಸ್ಥಿ ಮಾಡುತ್ತೇವೆ. ಇದಕ್ಕಾಗಿ ₹60 ಲಕ್ಷ ಮೀಸಲಿಟ್ಟಿದ್ದೇವೆ ಎಂದು ಹಲವು ತಿಂಗಳ ಹಿಂದೆಯೇ ಪಂಚಾಯತರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಭರವಸೆ ನೀಡಿದ್ದರು. ಈವರೆಗೂ ರಸ್ತೆ ದುರಸ್ಥಿಯನ್ನೂ ಮಾಡಿಲ್ಲ’ ಎಂದು ಸ್ಥಳೀಯ ಕೆಲವರು ಆರೋಪಿಸಿದರು.

ರಾಜಕೀಯ ಹಗೆತನ!

ಬಿಸಲಕೊಪ್ಪ–ಉಲ್ಲಾಳ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಅದನ್ನು ದುರಸ್ಥಿಪಡಿಸದಿಲ್ಲರುವುದರ ಹಿಂದೆ ರಾಜಕೀಯ ಹಗೆತನದ ಕಾರಣವಿದೆ. ಪ್ರಭಾವಿ ರಾಜಕೀಯ ವ್ಯಕ್ತಿಯೊಬ್ಬರು ಉದ್ದೇಶಪೂರ್ವಕವಾಗಿ ಅನುದಾನ ತಡೆಹಿಡಿದಿದ್ದಾರೆ ಎನ್ನುತ್ತಾರೆ ಸ್ಥಳೀಯ ರಾಜಕೀಯ ಮುಖಂಡರು.

‘ಕಳೆದ ಸಾಲಿನ ಅತಿವೃಷ್ಟಿ ಅನುದಾನದಲ್ಲಿ ರಸ್ತೆಗೆ ಮೊದಲು ಅನುದಾನ ಬಿಡುಗಡೆ ಮಾಡಿದ್ದರು. ಕೊನೆ ಕ್ಷಣದಲ್ಲಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ರಾಜಕೀಯ ವೈಷಮ್ಯದ ಕಾರಣಕ್ಕೆ ಜನರಿಗೆ ತೊಂದರೆ ಉಂಟು ಮಾಡಿದ್ದನ್ನು ಮರೆಯಲಾರೆವು’ ಎಂದು ಎಚ್ಚರಿಸಿದ್ದಾರೆ.

-------------

ಬಿಸಲಕೊಪ್ಪ–ಉಲ್ಲಾಳ ಸಂಪರ್ಕ ರಸ್ತೆ ದುರಸ್ಥಿಗೆ ಅನುದಾನ ಲಭ್ಯತೆಯ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.

ಅನಿಲಕುಮಾರ್ ಎಸ್.

ಎಇಇ ಪಂಚಾಯತರಾಜ್ ಎಂಜಿನಿಯರಿಂಗ್ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.