ADVERTISEMENT

ಭಟ್ಕಳ: ರೈಲು ನಿಲುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 16:25 IST
Last Updated 6 ಡಿಸೆಂಬರ್ 2021, 16:25 IST
ನೇತ್ರಾವತಿ ರೈಲು ನಿಲುಗಡೆ ಮಾಡುವಂತೆ ಆಗ್ರಹಿಸಿ ಭಟ್ಕಳ ವಿಕಾಸ್ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು
ನೇತ್ರಾವತಿ ರೈಲು ನಿಲುಗಡೆ ಮಾಡುವಂತೆ ಆಗ್ರಹಿಸಿ ಭಟ್ಕಳ ವಿಕಾಸ್ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು   

ಭಟ್ಕಳ: ಕೇರಳದಿಂದ ಹೊರಡುವ ನೇತ್ರಾವತಿ ರೈಲನ್ನು ಭಟ್ಕಳದಲ್ಲಿ ನಿಲುಗಡೆ ಮಾಡುವಂತೆ ಆಗ್ರಹಿಸಿ ಭಟ್ಕಳ ವಿಕಾಸ್ ಸಮಿತಿ ವತಿಯಿಂದ ಭಾನುವಾರ ಭಟ್ಕಳ ಕೊಂಕಣ ರೈಲ್ವೆ ನಿಲ್ದಾಣ ಅಧಿಕಾರಿ ಉಮೇಶ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿ ದಿನ ಕೇರಳದಿಂದ ಮುಂಬೈಗೆ ಹೊರಡುವ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿಗೆ ಈ ಮೊದಲು ಭಟ್ಕಳದಲ್ಲಿ ನಿಲುಗಡೆ ಇತ್ತು. ಕೋವಿಡ್ ನಂತರದ ದಿನಗಳಲ್ಲಿ ಈ ನಿಲುಗಡೆಯನ್ನು ತಡೆಹಿಡಿಯಲಾಗಿದೆ. ಅದರೆ ಪಕ್ಕದ ಮುರ್ಡೇಶ್ವರ ಹಾಗೂ ಬೈಂದೂರಿನಲ್ಲಿ ನಿಲುಗಡೆ ಮಾಡಲಾಗುತ್ತಿದೆ. ಭಟ್ಕಳದಿಂದ ನಿತ್ಯ ನೂರಾರು ಪ್ರಯಾಣಿಕರು ಕೇರಳ ಹಾಗೂ ಮುಂಬೈಗೆ ಪ್ರಯಾಣಿಸುತ್ತಾರೆ. ಈ ರೈಲಿಗೆ ಭಟ್ಕಳದಿಂದ ಉತ್ತಮ ಆದಾಯ ಕೂಡ ಇದೆ ಎಂದರು.

ಕಾರವಾರದಿಂದ ಮಂಗಳೂರಿಗೆ ತೆರಳುತಿದ್ದ ಡೆಮು ರೈಲನ್ನು ಸಹ ಬಂದ್ ಮಾಡಲಾಗಿದೆ. ಇದಕ್ಕೆ ಸಮಜಾಯಿಷಿ ನೀಡಿದ ರೈಲ್ವೆ ಅಧಿಕಾರಿಗಳು 200 ಕಿ.ಮೀ.ಗಿಂತ ಜಾಸ್ತಿ ದೂರವ ಕಾರಣ ಈ ರೈಲನ್ನು ಎಕ್ಸ್‌ಪ್ರೆಸ್‌ ರೈಲಾಗಿ
ಪರಿವರ್ತಿಸಲಾಗಿದೆ ಎಂದರು.

ADVERTISEMENT

ಆದರೆ ಈ ರೈಲನ್ನು ಮೊದಲು ಭಟ್ಕಳದಿಂದಲೇ ಪ್ರಾರಂಭಿಸಿದ್ದರು. ಭಟ್ಕಳದಿಂದ ಮಂಗಳೂರು 200 ಕಿ.ಮೀ. ವ್ಯಾಪ್ತಿ ಒಳಗೆ ಬರುವುದರಿಂದ ಈ ರೈಲನ್ನು ಪುನಃ ಭಟ್ಕಳದಿಂದಲೇ ಆರಂಭಿಸುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.

ಭಟ್ಕಳ ವಿಕಾಸ್ ಸಮಿತಿ ಅಧ್ಯಕ್ಷ ಕೃಷ್ಣಾನಂದ ಪ್ರಭು, ಸಮಿತಿ ಸದಸ್ಯರಾದ ಸತೀಶಕುಮಾರ ನಾಯ್ಕ, ನರೇಂದ್ರ ನಾಯಕ, ಶ್ರೀಧರ ನಾಯ್ಕ, ಸುರೇಂದ್ರ ಕಾಮತ್, ಎ.ಎನ್.ಫೈ, ಶಂಕರ ಶೆಟ್ಟಿ, ವೆಂಕಟೇಶ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.