ADVERTISEMENT

ಫಲ ನೀಡಿದ ‘ಸಹಬಾಳ್ವೆ ಸಹ ಜೀವನ’

‘ಆನೆ ಮತ್ತು ಮಾನವ’ ಸಂಘರ್ಷ ನಿಯಂತ್ರಣಕ್ಕೆ ಯೋಜನೆ

ಶಾಂತೇಶ ಬೆನಕನಕೊಪ್ಪ
Published 18 ಡಿಸೆಂಬರ್ 2019, 14:28 IST
Last Updated 18 ಡಿಸೆಂಬರ್ 2019, 14:28 IST
ಮುಂಡಗೋಡ ತಾಲ್ಲೂಕಿನ ರೈತರಿಗೆ ಅರಣ್ಯ ಇಲಾಖೆ ವತಿಯಿಂದ ಆನೆ ಓಡಿಸಲು ನೆರವಾಗುವ ಪರಿಕರಗಳನ್ನು ನೀಡುತ್ತಿರುವುದು
ಮುಂಡಗೋಡ ತಾಲ್ಲೂಕಿನ ರೈತರಿಗೆ ಅರಣ್ಯ ಇಲಾಖೆ ವತಿಯಿಂದ ಆನೆ ಓಡಿಸಲು ನೆರವಾಗುವ ಪರಿಕರಗಳನ್ನು ನೀಡುತ್ತಿರುವುದು   

ಮುಂಡಗೋಡ: ‘ಆನೆ ಮತ್ತು ಮಾನವ’ ನಡುವಿನ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ, ‘ಸಹಬಾಳ್ವೆಯೇ ಸಹ ಜೀವನ’ ಯೋಜನೆ ಪರಿಣಾಮ ಬೀರುತ್ತಿದೆ. ಕಾಳಿ ಹುಲಿ ರಕ್ಷಿತ ಅರಣ್ಯ(ಕೆಟಿಆರ್) ಸಹಯೋಗದಲ್ಲಿ, ವನ್ಯಜೀವಿ ಸಂಶೋಧನೆ ಮತ್ತು ರಕ್ಷಣೆ ಸಂಸ್ಥೆ, ಗ್ರಾಮ ಅರಣ್ಯ ಸಮಿತಿಗಳು ಕೈಜೋಡಿಸಿವೆ.

ಹಳಿಯಾಳ, ಯಲ್ಲಾಪುರ, ಮುಂಡಗೋಡ ಹಾಗೂ ಶಿರಸಿ ತಾಲ್ಲೂಕಿನ ಬನವಾಸಿ ಭಾಗಗಳಲ್ಲಿ, ಪ್ರತಿ ವರ್ಷ ಕಾಡಾನೆಗಳು 3–4 ತಿಂಗಳು ಕಾಲ ಸಂಚಾರ ನಡೆಸುವುದು ವಾಡಿಕೆ. ಈ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿ ಮಾಡಿ, ರೈತರಿಗೆ ಆರ್ಥಿಕವಾಗಿ ನಷ್ಟ ಉಂಟು ಮಾಡುತ್ತವೆ. ಈ ರೀತಿ ವನ್ಯಜೀವಿ ಹಾಗೂ ಮನುಷ್ಯ ಸಂಘರ್ಷಕ್ಕೆ ಒಳಗಾಗದಂತೆ, ಪೂರಕವಾಗಿ ಜೀವನ ನಡೆಸಲು ಅರಣ್ಯ ಇಲಾಖೆ ವಿನೂತನ ಯೋಜನೆ ಜಾರಿಗೊಳಿಸಿದೆ. ಯೋಜನೆಯಡಿ ರೈತರಿಗೆ ಅಗತ್ಯ ಪರಿಕರಗಳನ್ನು ನೀಡಿ, ಆನೆಗಳಿಂದ ಸುಲಭವಾಗಿ ಬೆಳೆ ರಕ್ಷಣೆ ಮಾಡಿಕೊಳ್ಳುವ ಪ್ರಯೋಗಕ್ಕೆ ಚಾಲನೆ ನೀಡಿದೆ.

‘ಆನೆಗಳನ್ನು ಓಡಿಸಲು ಟಾರ್ಚ್‌, ಟ್ರಿಪ್‌ ಅಲಾರಾಂ ಬಳಸುವುದು, ಮರದ ಅಟ್ಟ, ಜೇನು ಬೇಲಿ ನಿರ್ಮಾಣ ಹಾಗೂ ಮೆಣಸಿನ ಹೊಗೆಯಿಂದ ಓಡಿಸುವ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ನೀಡಲಾಗಿದೆ. ಈ ಹಿಂದೆ ಕೆಲವೊಂದು ಜಮೀನಿನ ಆಯ್ದ ಭಾಗದಲ್ಲಿ ಮಾತ್ರ ಪರಿಕರಗಳನ್ನು ಅಳವಡಿಸಲಾಗುತ್ತಿತ್ತು. ಇದರಿಂದ ಕಾಡಾನೆಗಳು ಆ ಭಾಗದಲ್ಲಿ ಸಂಚರಿಸದೇ, ಬೇರೆ ಕಡೆ ಬೆಳೆ ಹಾನಿ ಮಾಡುತ್ತಿದ್ದವು’ ಎನ್ನುತ್ತಾರೆ ವನ್ಯಜೀವಿ ಸಂರಕ್ಷಣೆ ಮತ್ತು ಸಂಶೋಧನೆ ಸೊಸೈಟಿಯ ಸದಸ್ಯ ರವಿ ಯಲ್ಲಾಪುರ.

ADVERTISEMENT

‘ಉಚಿತವಾಗಿ ನೀಡಿರುವ ಪರಿಕರಗಳನ್ನು. ಹೆಚ್ಚಿನ ರೈತರು ಜಮೀನಿನಲ್ಲಿ ಅಳವಡಿಸಿದ್ದಾರೆ. ಇದರಿಂದ ಕಾಡಾನೆಗಳು ಈ ವರ್ಷ ಸಾಂಪ್ರದಾಯಿಕ ಪಥವನ್ನು ಬದಲಿಸಿವೆ. ಪರಿಕರಕ್ಕಾಗಿ ರೈತರಿಂದ ಇನ್ನೂ ಹೆಚ್ಚಿನ ಬೇಡಿಕೆ ಬರುತ್ತಿದೆ’ ಎಂದರು. ‘ಆನೆ ಮತ್ತು ಮಾನವ ಸಂಘರ್ಷ ಕಡಿಮೆ ಮಾಡುವ, ಇಲಾಖೆಯ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ. ಫ್ಲ್ಯಾಶ್ ಲೈಟ್, ತಾಡಪತ್ರಿ, ಟ್ರಿಪ್ ಅಲಾರಾಂ ಸಹಿತ ಇನ್ನಿತರ ಪರಿಕರಗಳನ್ನು ಕೆಟಿಆರ್‌ನಿಂದ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೈತರನ್ನು ಈ ಯೋಜನೆಯಡಿ ಸೇರಿಸಲಾಗುವುದು’ ಎಂದು ಕಾಳಿ ಹುಲಿ ರಕ್ಷಿತ ಅರಣ್ಯದ ಎಸಿಎಫ್‌ ಕೆ.ಎಸ್.ಗೊರವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.