ADVERTISEMENT

‘ಪಕ್ಷದ ತೀರ್ಮಾನಕ್ಕೆ ಬದ್ಧ’

ಉಪಚುನಾವಣೆ: ನಿವೇದಿತ್ ಸ್ಪರ್ಧಿಸುವ ಇಂಗಿತ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 12:14 IST
Last Updated 3 ಆಗಸ್ಟ್ 2019, 12:14 IST
ನಿವೇದಿತ್ ಆಳ್ವ
ನಿವೇದಿತ್ ಆಳ್ವ   

ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಪಕ್ಷ ಯಾವುದೇ ಜವಾಬ್ದಾರಿವಹಿಸಿದರೂ ಅದಕ್ಕೆ ಬದ್ಧವಾಗಿರುವುದಾಗಿ ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ನಿವೇದಿತ್ ಆಳ್ವ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಶನಿವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಉಪಚುನಾವಣೆ ಟಿಕೆಟ್ ಪಡೆಯಲು ನಾನು ಲಾಬಿ ಮಾಡುವುದಿಲ್ಲ. ಪಕ್ಷ ಯಾರನ್ನೇ ನಿಲ್ಲಿಸಿದರೂ ಒಮ್ಮತದಿಂದ ಕೆಲಸ ಮಾಡುತ್ತೇವೆ. ಒಂದೊಮ್ಮೆ ಪಕ್ಷ ನನ್ನನ್ನೇ ಅಭ್ಯರ್ಥಿಯಾಗಿ ಘೋಷಿಸಿದರೆ ವರಿಷ್ಠರ ತೀರ್ಮಾನಕ್ಕೆ ತಲೆಬಾಗುತ್ತೇನೆ’ ಎಂದರು.

‘ಕ್ಷೇತ್ರಕ್ಕೆ ಅನುದಾನ ಸಿಕ್ಕಿಲ್ಲ, ಅಭಿವೃದ್ಧಿಯಾಗಿಲ್ಲವೆಂಬ ಕಾರಣಕ್ಕೆ ರಾಜೀನಾಮೆ ನೀಡಿರುವುದಾಗಿ ಅನರ್ಹಗೊಂಡಿರುವ ಶಾಸಕರ ಹೇಳಿಕೆಯನ್ನು ಒಪ್ಪಲಾಗದು. ಸಚಿವ ಸ್ಥಾನ ಇದ್ದವರು, ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ದೊರೆತವರು ಸಹ ರಾಜೀನಾಮೆ ನೀಡಿದ್ದಾರೆ. ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಿದ್ದಾಗಿ ಹಿಂದಿನ ಮುಖ್ಯಮಂತ್ರಿ ಹೇಳಿದ್ದರು. ಹೀಗಿದ್ದೂ, ಅಭಿವೃದ್ಧಿಯ ನೆಪ ಹೇಳಿ ರಾಜೀನಾಮೆ ನೀಡಿದ್ದು ಸರಿಯಲ್ಲ. ಸಮ್ಮಿಶ್ರ ಸರ್ಕಾರ ಉತ್ತಮ ಆಡಳಿತ ನೀಡಿದೆ’ ಎಂದು ಸಮರ್ಥಿಸಿಕೊಂಡರು.

ADVERTISEMENT

‘ಹೈಕಮಾಂಡ ಸಂಸ್ಕೃತಿ ಬಿಜೆಪಿಯಲ್ಲಿದೆಯೇ ಅಥವಾ ಕಾಂಗ್ರೆಸ್‌ನಲ್ಲಿದೆಯೇ ಎಂದು ಜನರಿಗೆ ಅರ್ಥವಾಗುತ್ತಿದೆ. ಇಷ್ಟು ದಿನ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸಂಸ್ಕೃತಿ ಇದೆ ಎಂದು ಬಿಜೆಪಿಯವರು ಬೊಬ್ಬೆ ಹಾಕುತ್ತಿದ್ದರು. ಆದರೆ, ಈಗ ಬಿಜೆಪಿ ಕೇಂದ್ರ ನಾಯಕರ ಭೇಟಿಗೆ, ರಾಜ್ಯದ ನಾಯಕರಿಗೆ ಅವಕಾಶ ಸಿಗುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಒಂದು ವಾರ ಕಳೆದರೂ ಸಚಿವ ಸಂಪುಟ ರಚನೆ ಸಾಧ್ಯವಾಗಿಲ್ಲ. ಮೋದಿ ಮತ್ತು ಅಮಿತ್ ಶಾ ಆಡಿಸಿದಂತೆ ಆಟವಾಡುವ ಸ್ಥಿತಿ ರಾಜ್ಯ ಬಿಜೆಪಿಯದ್ದಾಗಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.