ADVERTISEMENT

ಕುಮಟಾ: ಪತ್ತೆಯಾಗದ ಇಬ್ಬರು – ಬೆಂಗಳೂರಿಗೆ ವಾಪಸಾದ ಪ್ರವಾಸಿಗರು

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 14:01 IST
Last Updated 26 ಜೂನ್ 2022, 14:01 IST
ಕುಮಟಾ ತಾಲ್ಲೂಕಿನ ಬಾಡದಲ್ಲಿ ಶನಿವಾರ ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾದ ನಾಲ್ವರು ಸಹಪಾಠಿಗಳನ್ನು ನೆನೆದು ದುಃಖಿಸುತ್ತಿರುವ ಬೆಂಗಳೂರಿನ ಪ್ರವಾಸಿಗರು
ಕುಮಟಾ ತಾಲ್ಲೂಕಿನ ಬಾಡದಲ್ಲಿ ಶನಿವಾರ ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾದ ನಾಲ್ವರು ಸಹಪಾಠಿಗಳನ್ನು ನೆನೆದು ದುಃಖಿಸುತ್ತಿರುವ ಬೆಂಗಳೂರಿನ ಪ್ರವಾಸಿಗರು   

ಕುಮಟಾ: ತಾಲ್ಲೂಕಿನ ಬಾಡದಲ್ಲಿ ಶನಿವಾರ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಇಬ್ಬರ ಮೃತದೇಹಗಳನ್ನು, ಮರಣೋತ್ತರ ಪರೀಕ್ಷೆಯ ನಂತರ ಕುಟುಂಬ ಸದಸ್ಯರಿಗೆ ಭಾನುವಾರ ಹಸ್ತಾಂತರಿಸಲಾಯಿತು.

ಬೆಂಗಳೂರಿನ ಕಸ್ತೂರಬಾ ನಗರದ ಅರ್ಜುನ್ (23) ಹಾಗೂ ಪೀಣ್ಯದ ಚೈತ್ರಶೀ (27) ಮೃತಪಟ್ಟಿದ್ದರು. ಅವರೊಂದಿಗೆ ನೀರು ಪಾಲಾಗಿದ್ದ ಮತ್ತಿಬ್ಬರು ಭಾನುವಾರವೂ ಪತ್ತೆಯಾಗಲಿಲ್ಲ.

ಸಿ.ಪಿ.ಐ ತಿಮ್ಮಪ್ಪ ನಾಯ್ಕ ಮಾಹಿತಿ ನೀಡಿ, ‘ನೀರು ಪಾಲಾಗಿರುವ ಬೆಂಗಳೂರಿನ ರಾಜಾಜಿನಗರ ನಿವಾಸಿ ತೇಜಸ್ (22) ಹಾಗೂ ಕನಕಪುರ ರಸ್ತೆ ನಿವಾಸಿ ಕಿರಣಕುಮಾರ (27) ಅವರಿಗೆ ಶೋಧ ಕಾರ್ಯ ಮುಂದುವರಿದಿದೆ. ಅವರಿಬ್ಬರ ಸುಳಿವು ಸಿಕ್ಕಿದರೆ ಮಾಹಿತಿ ನೀಡಲು ಎಲ್ಲೆಡೆ ಸೂಚನೆ ನೀಡಲಾಗಿದೆ. ಅವರ ಪಾಲಕರು ಇನ್ನೂ ಬಾಡದಲ್ಲಿಯೇ ಇದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಭಾನುವಾರ ಕೂಡ ಸಮುದ್ರದಲ್ಲಿ ಭಾರಿ ಅಲೆಗಳ ಅಬ್ಬರ ಮುಂದುವರಿದಿದ್ದು, ದೋಣಿಗಳು ನೀರಿಗಿಳಿಯದಂಥ ಸ್ಥಿತಿಯಿತ್ತು. ತಾಲ್ಲೂಕಿನ ಬೀಚ್ ರೆಸಾರ್ಟ್‌ಗಳಲ್ಲಿ ದೂರದಿಂದ ಬರುವ ಪ್ರವಾಸಿಗರಿಗೆ ಉಂಟಾಗುವ ಅಪಾಯ ಸ್ಥಿತಿಗತಿಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದು ತಹಶೀಲ್ದಾರ್ ವಿವೇಕ ಶೇಣ್ವಿ ತಿಳಿಸಿದರು.

ನೀರುಪಾಲಾಗಿದ್ದ ನಾಲ್ವರ ಜೊತೆ ಬೆಂಗಳೂರಿನಿಂದ ಪ್ರವಾಸ ಬಂದಿದ್ದ ಉಳಿದವರು ಬೆಂಗಳೂರಿಗೆ ವಾಪಸಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.