ADVERTISEMENT

ಕಾರವಾರ: ಜಲದಾಹ ನೀಗಿಸಿದ ಭಾರಿ ಮಳೆ: ಜನರ, ಅಧಿಕಾರಿಗಳ ನಿಟ್ಟುಸಿರು

ಈ ವರ್ಷ ಜಿಲ್ಲೆಯಲ್ಲಿ ಬರ ಪೀಡಿತ ತಾಲ್ಲೂಕುಗಳಿಲ್ಲ

ಸದಾಶಿವ ಎಂ.ಎಸ್‌.
Published 14 ಮೇ 2020, 19:30 IST
Last Updated 14 ಮೇ 2020, 19:30 IST
ಮುಂಡಗೋಡ ತಾಲ್ಲೂಕಿನ ಧರ್ಮಾ ಜಲಾಶಯವು ಕಳೆದ ವರ್ಷ ಜುಲೈನಲ್ಲಿ ಭರ್ತಿಯಾಗಿತ್ತು (ಸಂಗ್ರಹ ಚಿತ್ರ)
ಮುಂಡಗೋಡ ತಾಲ್ಲೂಕಿನ ಧರ್ಮಾ ಜಲಾಶಯವು ಕಳೆದ ವರ್ಷ ಜುಲೈನಲ್ಲಿ ಭರ್ತಿಯಾಗಿತ್ತು (ಸಂಗ್ರಹ ಚಿತ್ರ)   

ಕಾರವಾರ: ಕಳೆದ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯಲ್ಲಿ ಸಾಕಷ್ಟು ಜನರನ್ನು ಚಿಂತೆಗೀಡು ಮಾಡಿತ್ತು. ಆದರೆ, ಬಳಿಕ ಮಳೆಗಾಲದಲ್ಲಿ ಸುರಿದ ಭಾರಿ ಮಳೆ, ಈ ವರ್ಷದ ಬೇಸಿಗೆಗೆ ಪ್ರಯೋಜನವಾಗಿದೆ. ಅಲ್ಲದೇ ವಿವಿಧ ಜಲಮೂಲಗಳನ್ನು ಅಭಿವೃದ್ಧಿ ಪಡಿಸಿದ್ದೂ ನೆರವಿಗೆ ಬಂದಿದೆ.

ಕಳೆದ ವರ್ಷ ಜನವರಿ ಕೊನೆಯಲ್ಲೇ ಜಿಲ್ಲೆಯ ವಿವಿಧೆಡೆ ಕುಡಿಯುವ ನೀರಿನ ಕೊರತೆ ಕಂಡುಬಂದಿತ್ತು. ಎಂಟು ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿತ್ತು. ಒಂದೆಡೆ ತೆರೆದ ಬಾವಿಗಳಲ್ಲಿ ನೀರು ಖಾಲಿಯಾಗಿದ್ದರೆ, ಮತ್ತೊಂದೆಡೆ ಉಪ್ಪು ನೀರು ತುಂಬಿಕೊಂಡು ತೊಂದರೆಯಾಗಿತ್ತು.

ಜಿಲ್ಲೆಯ ಸುಮಾರು 420 ಹಳ್ಳಿಗಳಲ್ಲಿ ಜೀವಜಲದ ಕೊರತೆಯಾಗಿ, ಪರ್ಯಾಯ ವ್ಯವಸ್ಥೆಗಳನ್ನು ಜಿಲ್ಲಾ ಪಂಚಾಯ್ತಿ ಕೈಗೊಂಡಿತ್ತು. ಹಳ್ಳಿಗಳಲ್ಲೂ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಯ ಅನಿವಾರ್ಯ ಸ್ಥಿತಿಯನ್ನು ಕಳೆದ ವರ್ಷ ಜಿಲ್ಲೆ ಕಂಡಿತ್ತು. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ರಚಿಸಿ ತಲಾ ₹ 25 ಲಕ್ಷದಂತೆ ಅನುದಾನ ಮೀಸಲಿಡಲಾಗಿತ್ತು.ಆದರೆ, ಈ ವರ್ಷ ಮೇ ತಿಂಗಳ ಅರ್ಧಾಂಶ ಕಳೆದರೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಟ್ಯಾಂಕರ್‌ಗಳ ಸಂಚಾರ ಅಷ್ಟಾಗಿ ಆರಂಭವಾಗಿಲ್ಲ. ಅಲ್ಲೊಂದು ಇಲ್ಲೊಂದು ದೂರುಗಳನ್ನು ಬಿಟ್ಟರೆ ಬಹುಪಾಲು ಊರುಗಳಲ್ಲಿ ನೀರಿನ ಲಭ್ಯತೆಯಿದೆ.

ADVERTISEMENT

ಎಲ್ಲೆಲ್ಲಿ ಸಮಸ್ಯೆ ಶುರು?:ಕಡುಬೇಸಿಗೆಯ ಈ ದಿನಗಳಲ್ಲಿ ಬೆರಳೆಣಿಕೆಯಪ್ರದೇಶಗಳಲ್ಲಿ ನೀರಿನ ಸಮಸ್ಯೆಯ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಕುಮಟಾಪುರಸಭೆ ವ್ಯಾಪ್ತಿಯಚಿತ್ರಿಗಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿದೆ. ಬೇಸಿಗೆ ಕಾಲದಲ್ಲಿ ಇದೊಂದು ಸಣ್ಣ ಉದ್ಯಮದ ರೀತಿಯಾಗಿದೆ. ಈ ಪ್ರದೇಶದಲ್ಲಿ ಎಲ್ಲೇಬಾವಿ ತೋಡಿದರೂ ಉಪ್ಪು ನೀರು ಬರುತ್ತದೆ. ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಮರಾಕಲ್ ಯೋಜನೆ ಅಲ್ಲಿಗೆ ವಿಸ್ತರಣೆಯಾದರೆ ಪ್ರಯೋಜನವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಅಂಕೋಲಾ ತಾಲ್ಲೂಕಿನ ಬೆಳಂಬಾರ, ಶೆಟಗೇರಿ, ಬೆಳಸೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಮಾರು10 ಹಳ್ಳಿಗಳಿಗೆ ಒಂದು ವಾರದಿಂದ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿದೆ.ಉಳಿದಂತೆ ತಾಲೂಕಿನಲ್ಲಿ ಸಮಸ್ಯೆ ಕಂಡುಬಂದಿಲ್ಲ.

ಜೊಯಿಡಾ ತಾಲ್ಲೂಕಿನಲ್ಲಿ ಅಣಶಿ ಹಾಗೂ ಕುಂಬಾರವಾಡ ಭಾಗದಲ್ಲಿ ಸದ್ಯಕ್ಕೆ ನೀರಿನ ಲಭ್ಯತೆಯಿದೆ. ಆದರೆ, ಮಳೆಯಾಗುವುದು ತಡವಾದರೆ ಜನರಿಗೆ ತಾಪತ್ರಯ ತಪ್ಪಿದ್ದಲ್ಲ ಎನ್ನುವುದು ಗ್ರಾಮಸ್ಥರ ಆತಂಕವಾಗಿದೆ. ಭಟ್ಕಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಟೆಂಡರ್ ಕರೆಯಲಾಗಿದೆ. ಸದ್ಯಕ್ಕೆ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆಯಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಬರಪೀಡಿತ ತಾಲ್ಲೂಕುಗಳಿಲ್ಲ’:‘ಜಿಲ್ಲೆಯಲ್ಲಿ ಈ ಬಾರಿ ಬರಪೀಡಿತ ತಾಲ್ಲೂಕುಗಳಿಲ್ಲ ಎಂಬುದು ಸಂತಸದ ಸಂಗತಿಯಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಶಾಸಕರ ನೇತೃತ್ವದ ಕಾರ್ಯಪಡೆಗೆ ತಲಾ ₹50 ಲಕ್ಷವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನೀಡಲಾಗಿದೆ. ಇದರ ಮೂಲಕ ಹೊಸ ಜಲಮೂಲಗಳ ಸೃಷ್ಟಿ ಮತ್ತು ಅಸ್ತಿತ್ವದಲ್ಲಿರುವುದರ ದುರಸ್ತಿಗೆ ಅವಕಾಶವಿದೆ. ಅಲ್ಲದೇ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಜಿಲ್ಲಾಧಿಕಾರಿ ಖಾತೆಗೆ ₹1 ಕೋಟಿ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.