ADVERTISEMENT

ಪ್ರಥಮ ಚಿಕಿತ್ಸೆಗೆ ಸಲಕರಣೆ ಇಲ್ಲ!

ಸಾರಿಗೆ ಸಂಸ್ಥೆ ಬಸ್‍ಗಳಲ್ಲಿ ನೆಪ ಮಾತ್ರಕ್ಕೆ ಇರುವ ಪೆಟ್ಟಿಗೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 16:50 IST
Last Updated 25 ಸೆಪ್ಟೆಂಬರ್ 2021, 16:50 IST
ಶಿರಸಿ ಸಾರಿಗೆ ವಿಭಾಗದ ಬಸ್‍ವೊಂದರಲ್ಲಿ ಪ್ರಥಮ ಚಿಕಿತ್ಸೆ ಸಲಕರಣೆ ಪೆಟ್ಟಿಗೆ ಖಾಲಿ ಇರುವದು.
ಶಿರಸಿ ಸಾರಿಗೆ ವಿಭಾಗದ ಬಸ್‍ವೊಂದರಲ್ಲಿ ಪ್ರಥಮ ಚಿಕಿತ್ಸೆ ಸಲಕರಣೆ ಪೆಟ್ಟಿಗೆ ಖಾಲಿ ಇರುವದು.   

ಶಿರಸಿ: ಅಪಘಾತವಾದಾಗ ತುರ್ತು ಚಿಕಿತ್ಸೆಗೆ ನೆರವಾಗಲು ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಪ್ರಥಮ ಚಿಕಿತ್ಸೆ ಸಲಕರಣೆಗಳನ್ನೊಳಗೊಂಡ ಪೆಟ್ಟಿಗೆ ಇರಬೇಕೆಂಬ ನಿಯಮವಿದೆ. ಆದರೆ, ಅದು ಕಾಗದದಲ್ಲಷ್ಟೇ ಸೀಮಿತವಾಗಿದೆ.

ಬಸ್ ಚಾಲಕ ಕುಳಿತುಕೊಳ್ಳುವ ಸೀಟಿನ ಪಕ್ಕ ಅಥವಾ ಹಿಂಭಾಗದಲ್ಲಿ ಬ್ಯಾಂಡೇಜ್ ಪಟ್ಟಿ, ಗಾಯದ ಮುಲಾಮು, ಬ್ಲೇಡ್, ನೋವು ನಿವಾರಕ ಔಷಧ, ಮುಲಾಮು ಒಳಗೊಂಡಿರುವ ಪೆಟ್ಟಿಗೆ ಇರಬೇಕಾಗುತ್ತದೆ. ಹಲವು ಬಸ್‍ಗಳಲ್ಲಿ ಈ ಸೌಲಭ್ಯ ಇದ್ದರೆ, ಶೇ.80ರಷ್ಟು ಬಸ್‍ಗಳಲ್ಲಿ ಪ್ರಥಮ ಚಿಕಿತ್ಸೆ ಸಲಕರಣೆ ಇಲ್ಲ. ಹಲವು ಬಸ್‍ಗಳಲ್ಲಿ ಪೆಟ್ಟಿಗೆಯನ್ನೇ ಇಟ್ಟಿಲ್ಲ.

ನಿರ್ಜನ ಪ್ರದೇಶ, ಕುಗ್ರಾಮಗಳ ರಸ್ತೆಯಲ್ಲಿ ಅಪಘಾತ ಸಂಭವಿಸಿದರೆ ತಕ್ಷಣ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಈ ಸೌಲಭ್ಯ ಅನುಕೂಲವಾಗುತ್ತಿತ್ತು. ಆದರೆ, ಸಂಸ್ಥೆಯ ಅಧಿಕಾರಿಗಳು, ಚಾಲಕ, ನಿರ್ವಾಹಕ ನಿರ್ಲಕ್ಷ್ಯದ ಪರಿಣಾಮ ಈ ಸೌಲಭ್ಯ ಕಾಟಾಚಾರಕ್ಕಿದೆ ಎಂಬುದು ಪ್ರಯಾಣಿಕರ ದೂರು.

ADVERTISEMENT

‘ಬಸ್‍ಗಳ ಯುಕ್ತತಾ ಪ್ರಮಾಣಪತ್ರ (ಫಿಟ್ನೆಸ್ ಸರ್ಟಿಫಿಕೇಟ್) ನೀಡುವಾಗ ಪ್ರಥಮ ಚಿಕಿತ್ಸೆ ಸಲಕರಣೆಯನ್ನೊಳಗೊಂಡ ಪೆಟ್ಟಿಗೆಇರುವುದನ್ನು ಖಚಿತಪಡಿಸಿಯೇ ನೀಡಲಾಗುತ್ತದೆ. ಸಲಕರಣೆಗಳನ್ನು ಇಟ್ಟುಕೊಳ್ಳುವ ಬಗ್ಗೆ ಚಾಲಕ, ನಿರ್ವಾಹಕರು ನಿಗಾ ಇಡಬೇಕಾಗುತ್ತದೆ’ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜಕುಮಾರ್.

‘ಪೆಟ್ಟಿಗೆ ಇಲ್ಲದ, ಸಲಕರಣೆ ಕೊರತೆ ಇರುವ ಬಸ್‍ಗಳನ್ನು ಪರಿಶೀಲಿಸಿ ಅವುಗಳಿಗೆ ಸಲಕರಣೆ ಒದಗಿಸುತ್ತೇವೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ’ ಎಂದು ಹೇಳಿದರು.

‘ಸಲಕರಣೆ ಇಟ್ಟರೆ ಸಾಲದು. ಅವುಗಳ ಬಳಕೆ ಬಗ್ಗೆಯೂ ಚಾಲಕರಿಗೆ, ನಿರ್ವಾಹಕರಿಗೆ ತರಬೇತಿ ನೀಡಬೇಕಾಗುತ್ತದೆ. ಪೆಟ್ಟಿಗೆ ಖಾಲಿ ಇರುವ ಬಗ್ಗೆ ತಿಳಿಸಿದರೆ ಅವುಗಳನ್ನು ಪೂರೈಸಲು ಸಾರಿಗೆ ಘಟಕಗಳಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.