ಭಟ್ಕಳ: ಭಟ್ಕಳ ತಾಲ್ಲೂಕು ಪಂಚಾಯಿತಿ 2025-26ನೇ ಸಾಲಿನ ಅಂದಾಜು ₹ 91.49 ಕೋಟಿ ಅನುದಾನ ನಿಗಧಿಪಡಿಸಿ ತಯಾರಿಸಲಾದ ಮುಂಗಡ ಪತ್ರವನ್ನು ಆಡಳಿತಾಧಿಕಾರಿ ಜಿ. ಸತೀಶ ಅವರು ಮಂಡಿಸಿದರು.
ಅವರು ಮಂಗಳವಾರ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಕಳೆದ ಸಾಲಿಗಿಂತ ಈ ಬಾರಿಯ ಮುಂಗಡ ಪತ್ರವು ಶೇ 17ರಷ್ಟು ಹೆಚ್ಚುವರಿಯಾಗಿರುತ್ತದೆ ಎಂದು ತಿಳಿಸಿದರು.
ಪ್ರಾಥಮಿಕ ಶಿಕ್ಷಣಕ್ಕಾಗಿ ₹ 53.57 ಕೋಟಿ, ಪ್ರೌಢ ಶಿಕ್ಷಣಕ್ಕಾಗಿ ₹ 10.80 ಕೋಟಿ, ವೈದ್ಯಕೀಯ ಹಾಗೂ ಜನಾರೋಗ್ಯ ಇಲಾಖೆಗೆ ₹ 65.21 ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ₹ 17.70 ಲಕ್ಷ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ₹ 7.12ಕೋಟಿ, ಕೃಷಿ ಇಲಾಖೆಗೆ ₹ 27.73 ಲಕ್ಷ, ಪಶು ಸಂಗೋಪನೆ ಇಲಾಖೆಗೆ ₹ 69.88 ಲಕ್ಷ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯಕ್ರಮಗಳಿಗೆ ₹ 4.16 ಕೋಟಿ ಮೀಸಲಿಡಲಾಗಿದ್ದು, ತೋಟಗಾರಿಕಾ ಕಾರ್ಯಕ್ರಮಕ್ಕಾಗಿ ಯಾವುದೇ ಅನುದಾನ ಮೀಸಲಿಟ್ಟಿಲ್ಲ ಎಂದು ಸಭೆಯಲ್ಲಿ ತಿಳಿಸಿದರು.
ಲಿಂಕ್ ಡಾಕ್ಯುಮೆಂಟ್ ಅನುದಾನದ ಹೊರತಾಗಿ ಕಟ್ಟಡ ಬಾಡಿಗೆ ಮತ್ತು ಇತರೆ ಮೂಲದಿಂದ ₹ 20 ಲಕ್ಷ ಹಾಗೂ ಅನಿರ್ಭಂದಿತ ಅನುದಾನದಡಿ ₹1.63 ಕೋಟಿ ಅನುದಾನವನ್ನು ನಿರೀಕ್ಷಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ನಂತರ ತಾಲ್ಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಮಂಗನ ಕಾಯಿಲೆ, ಚಿಕನ್‌ಗುನ್ಯ, ಡೆಂಘಿ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.
ತಾಲ್ಲೂಕಿನ ಪ್ರಾಥಮಿಕ ಶಾಲೆಗಳ ಜೊತೆ ಪದವಿ ಪೂರ್ವ ಕಾಲೇಜುಗಳಿಗೆ ವಿದ್ಯುತ್ ಸಂಪರ್ಕ ನೀಡಲು ಆದೇಶವಾಗಿದ್ದು, ವಸತಿ ನಿಲಯಗಳಿಗೂ ವಿದ್ಯುತ್ ಸಂಪರ್ಕ ನೀಡಲು ಆದೇಶವಾಗಿರುವ ಕುರಿತು ಅಧಿಕಾರಿಗಳು ಸಭೆಗೆ ತಿಳಿಸಿದರು. ತಾಲ್ಲೂಕಿನಲ್ಲಿ ಲೋಡ್ ಶೆಡ್ಡಿಂಗ್ ಪದ್ಧತಿ ಇಲ್ಲವಾಗಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಮಾತ್ರ ಆಗಾಗ ವಿದ್ಯುತ್ ವ್ಯತ್ಯಯವಾಗುತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ವೆಂಕಟೇಶ ನಾಯಕ, ಸಹಾಯಕ ಲೆಕ್ಕಾಧಿಕಾರಿ ರಾಜೇಶ ಮಹಾಲೆ ಇತರರು ಉಪಸ್ಥಿತರಿದ್ದರು. ಕರಿಯಪ್ಪ ನಾಯ್ಕ ಸ್ವಾಗತಿಸಿದರು, ತಾ.ಪಂ. ವ್ಯವಸ್ಥಾಪಕ ಕೃಷ್ಣಕಾಂತ ನಾಯ್ಕ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.