ADVERTISEMENT

ನಿರ್ವಹಣೆ ಕಾಣದ ಹೊಸ ಬಸ್ ನಿಲ್ದಾಣ

ಆವರಣದಲ್ಲಿ ಸಾಲು ಸಾಲು ಹೊಂಡ, ಚಾವಣಿ ಸೋರಿಕೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 14:43 IST
Last Updated 12 ಜುಲೈ 2021, 14:43 IST
ಶಿರಸಿ ನಗರದ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಬಿದ್ದ ದೊಡ್ಡ ಗಾತ್ರದ ಹೊಂಡಗಳಲ್ಲಿ ಮಳೆನೀರು ತುಂಬಿಕೊಂಡಿರುವುದು
ಶಿರಸಿ ನಗರದ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಬಿದ್ದ ದೊಡ್ಡ ಗಾತ್ರದ ಹೊಂಡಗಳಲ್ಲಿ ಮಳೆನೀರು ತುಂಬಿಕೊಂಡಿರುವುದು   

ಶಿರಸಿ: ನಗರದ ಹೊರವಲಯದಲ್ಲಿ ಒಂದೂವರೆ ದಶಕಗಳ ಹಿಂದೆ ನಿರ್ಮಾಣವಾದ ಹೊಸ ಬಸ್ ನಿಲ್ದಾಣ ನಿರ್ವಹಣೆ ಕೊರತೆಯಿಂದ ಸೊರಗಿದೆ. ಕಟ್ಟಡದ ಚಾವಣಿ ಸೋರುತ್ತಿದ್ದರೆ, ಆವರಣದಲ್ಲಿ ಬಿದ್ದ ಹೊಂಡಗಳಿಂದ ಸಂಚಾರಕ್ಕೂ ಸಮಸ್ಯೆಯಾಗಿದೆ.

ಹಳೆ ಬಸ್ ನಿಲ್ದಾಣ ಕಟ್ಟಡ ತೆರವುಗೊಂಡು ವರ್ಷ ಸಮೀಪಿಸಿದ್ದರೂ ಹೊಸ ಕಟ್ಟಡ ನಿರ್ಮಾಣ ಕೆಲಸ ಆರಂಭಗೊಂಡಿಲ್ಲ. ಆದರೆ, ಈಗಲೂ ಹೊಸ ಬಸ್ ನಿಲ್ದಾಣ ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಲು ಸಾರಿಗೆ ಸಂಸ್ಥೆ ಇಚ್ಛಾಶಕ್ತಿ ತೋರುತ್ತಿಲ್ಲ ಎಂಬ ದೂರು ಸಾರ್ವಜನಿಕರದ್ದಾಗಿದೆ.

ನಗರದಿಂದ ಹೊಸ ಜಿಲ್ಲೆಗಳಿಗೆ, ಕೆಲ ಸ್ಥಳೀಯ ಮಾರ್ಗಗಳಿಗೆ ತೆರಳುವ ಬಸ್‍ಗಳು ಹಳೆ ಬಸ್ ನಿಲ್ದಾಣದಿಂದ ಈ ನಿಲ್ದಾಣಕ್ಕೆ ಬಂದು ಹೊರಡುತ್ತವೆ. ನಿತ್ಯ ನೂರಾರು ಬಸ್‍ಗಳು ಓಡಾಟ ನಡೆಸುವ ನಿಲ್ದಾಣದ ಆವರಣದಲ್ಲಿ ದೊಡ್ಡಗಾತ್ರದ ಹೊಂಡಗಳು ಬಿದ್ದಿವೆ.

ADVERTISEMENT

‘ಹದಿನೈದು ವರ್ಷಗಳ ಹಿಂದೆ ನಿರ್ಮಾಣಗೊಂಡ ಕಟ್ಟಡವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಸಂಸ್ಥೆ ಮುಂದಾಗುತ್ತಿಲ್ಲ. ಪರಿಣಾಮ ನಿಲ್ದಾಣದ ಚಾವಣಿ ಅಲ್ಲಲ್ಲಿ ಮುರಿದಿದ್ದು ಮಳೆನೀರು ಸೋರಿಕೆಯಾಗುತ್ತಿದೆ. ಇದರಿಂದ ಕಾಂಕ್ರೀಟ್ ಕಂಬಗಳಿಗೆ ಹಾನಿಯುಂಟಾಗುತ್ತಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಅನಂತ ನಾಯ್ಕ.

‘ಕಚ್ಚಾ ರಸ್ತೆಗಿಂತಲೂ ನಿಲ್ದಾಣದ ಆವರಣವೇ ಕಳಪೆಯಾಗಿದೆ. ವರ್ಷದಿಂದ ಬಿದ್ದಿರುವ ಹೊಂಡಗಳನ್ನು ಮುಚ್ಚುವ ಕೆಲಸ ನಡೆಸದೆ ನಿರ್ಲಕ್ಷ ತೋರಲಾಗಿದೆ’ ಎಂದು ಅವರು ಆರೋಪಿಸಿದರು.

‘ಹೊಸ ಬಸ್ ನಿಲ್ದಾಣದ ನಿರ್ವಹಣೆ ಕಾರ್ಯ ಚುರುಕುಗೊಳಿಸಲಾಗುವುದು. ಚಾವಣಿಗಳಿಗೆ ಅಳವಡಿಸಿದ್ದ ಸಿಮೆಂಟ್ ಶೀಟುಗಳನ್ನು ಬದಲಿಸಿ ಹೊಸ ಮಾದರಿಯ ಶೀಟುಗಳನ್ನು ಅಳವಡಿಸುತ್ತೇವೆ. ಹೊಂಡಗಳನ್ನೂ ಮುಚ್ಚಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದೆ’ ಎಂದು ಸಾರಿಗೆ ಸಂಸ್ಥೆ ಶಿರಸಿ ಘಟಕದ ವ್ಯವಸ್ಥಾಪಕ ಸರ್ವೇಶ್ ಆರ್. ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.