ADVERTISEMENT

ಕಾರವಾರ | ಸೋಂಕಿತರ ಸಂಖ್ಯೆ ಹೆಚ್ಚಳ: ಆತಂಕ ಬೇಡ: ಜಿಲ್ಲಾಧಿಕಾರಿ ಹರೀಶಕುಮಾರ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 14:45 IST
Last Updated 6 ಜುಲೈ 2020, 14:45 IST
ಡಾ.ಕೆ.ಹರೀಶಕುಮಾರ್
ಡಾ.ಕೆ.ಹರೀಶಕುಮಾರ್   

ಕಾರವಾರ: ‘ಕೋವಿಡ್ ದೃಢಪಟ್ಟವರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಜಿಲ್ಲೆಯ ಜನರು ಗಾಬರಿ ಹಾಗೂ ಆತಂಕಗೊಳ್ಳಬೇಕಿಲ್ಲ. ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ನಗರದಲ್ಲಿಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಒಬ್ಬರಿಗೆ ಕೋವಿಡ್ ದೃಢಪಟ್ಟರೆ ಸಹಜವಾಗಿ 10ರಿಂದ 20 ಮಂದಿ ಅವರ ಸಂಪರ್ಕಕ್ಕೆ ಬರುತ್ತಾರೆ. ಎಲ್ಲರನ್ನೂ‍ಪತ್ತೆ ಹಚ್ಚಿ, ಪಾಸಿಟಿವ್ ಬಂದವರಿಗೆ ಚಿಕಿತ್ಸೆ ನೀಡಿದರೆ ಬೇಗನೆ ಗುಣಮುಖರಾಗಬಹುದು. ಅಂತೆಯೇ ಯಾವುದೇ ಸಾವು ಆಗದಂತೆ ನೋಡಿಕೊಳ್ಳಬಹುದು’ ಎಂದರು.

‘ಭಟ್ಕಳದಲ್ಲಿ ಕೆಲವು ದಿನಗಳಿಂದ ಕೋವಿಡ್ ದೃಢಪಟ್ಟವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕವನ್ನು ಪತ್ತೆ ಹಚ್ಚಲಾಗಿದೆ. ಹಾಗಾಗಿ ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯೆಂದು ಕಾಣುತ್ತಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರು ಸರಿಯಾಗಿ ಮಾಹಿತಿ ನೀಡಿದರೆ ರೋಗ ಲಕ್ಷಣ ಇರುವ ಮೊದಲೇ ಚಿಕಿತ್ಸೆ ನೀಡಬಹುದು’ ಎಂದು ಹೇಳಿದರು.

ADVERTISEMENT

‘ಭಟ್ಕಳದಲ್ಲಿ ಸೋಂಕು ಹರಡುವ ಪ್ರಮಾಣ ಕಡಿಮೆ ಮಾಡಲು ಸ್ವಯಂ ಪ್ರೇರಿತ ಲಾಕ್‌ಡೌನ್ ಮಾಡಲು ಸಿದ್ಧರಿದ್ದೇವೆ ಎಂದು ಕೆಲವು ಸಂಘಟನೆಯವರು ತಿಳಿಸಿದ್ದಾರೆ. ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವವರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬರಬಾರದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.