ADVERTISEMENT

ಬಂದರು ಹೂಳೆತ್ತಲು ಆಸಕ್ತರ ಕೊರತೆ: ಮರು ಟೆಂಡರ್‌ಗೆ ಸಿದ್ಧತೆ

ಬೈತಖೋಲ್‌ಗೆ ಒಬ್ಬರಿಂದ ಮಾತ್ರ ಅರ್ಜಿ: ಭಟ್ಕಳ ಬಂದರಿಗೆ ಯಾರಿಂದಲೂ ಇಲ್ಲ

ಸದಾಶಿವ ಎಂ.ಎಸ್‌.
Published 28 ನವೆಂಬರ್ 2022, 16:29 IST
Last Updated 28 ನವೆಂಬರ್ 2022, 16:29 IST
ಕಾರವಾರದ ಬೈತಖೋಲ್ ಮೀನುಗಾರಿಕಾ ಬಂದರಿನಲ್ಲಿ ದೋಣಿಗಳನ್ನು ಲಂಗರು ಹಾಕಿರುವುದು (ಸಂಗ್ರಹ ಚಿತ್ರ)
ಕಾರವಾರದ ಬೈತಖೋಲ್ ಮೀನುಗಾರಿಕಾ ಬಂದರಿನಲ್ಲಿ ದೋಣಿಗಳನ್ನು ಲಂಗರು ಹಾಕಿರುವುದು (ಸಂಗ್ರಹ ಚಿತ್ರ)   

ಕಾರವಾರ: ಮೀನುಗಾರರ ಹಲವು ವರ್ಷಗಳ ಬೇಡಿಕೆಯಾಗಿರುವ ಬಂದರಿನಿಂದ ಹೂಳೆತ್ತುವ ಕಾಮಗಾರಿಗೆ ರಾಜ್ಯ ಸರ್ಕಾರವು ಕೊನೆಗೂ ಅನುಮೋದನೆ ನೀಡಿದೆ. ಮೊದಲ ಹಂತದಲ್ಲಿ ಕಾರವಾರದ ಬೈತಖೋಲ್ ಮತ್ತು ಭಟ್ಕಳದ ಮೀನುಗಾರಿಕಾ ಬಂದರನ್ನು ಆಯ್ಕೆ ಮಾಡಲಾಗಿದೆ.

ಬೈತಖೋಲ್, ಭಟ್ಕಳ, ಗಂಗೊಳ್ಳಿ, ಮಲ್ಪೆ ಮತ್ತು ಮಂಗಳೂರಿನ ಮೀನುಗಾರಿಕಾ ಬಂದರುಗಳಲ್ಲಿ ಒಟ್ಟು ₹ 20 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಇದರಲ್ಲಿ ಭಟ್ಕಳ ಬಂದರಿಗೆ ₹ 5 ಕೋಟಿ ಮತ್ತು ಬೈತಖೋಲ್ ಬಂದರಿಗೆ ₹ 3.50 ಕೋಟಿ ಮಂಜೂರಾಗಿದೆ.

ಬೈತಖೋಲ್ ಮತ್ತು ಭಟ್ಕಳದ ಬಂದರುಗಳ ಹೂಳೆತ್ತಲು ಬಂದರು ಇಲಾಖೆಯಿಂದ ಈಗಾಗಲೇ ಒಂದು ಸಲ ಟೆಂಡರ್ ಕರೆಯಲಾಗಿದೆ. ಆದರೆ, ಟೆಂಡರ್‌ಗೆ ಅರ್ಜಿ ಸಲ್ಲಿಸುವವರ ಕೊರತೆ ಎದುರಾಗಿದ್ದು, ಮರು ಟೆಂಡರ್ ಕರೆಯಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ADVERTISEMENT

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಬಂದರು ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ತಾರಾನಾಥ ರಾಥೋಡ್, ‘ಬೈತಖೋಲ್ ಬಂದರಿನಲ್ಲಿ ಕಾಮಗಾರಿ ಕೈಗೊಳ್ಳಲು ಒಬ್ಬರೇ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಭಟ್ಕಳಕ್ಕೆ ಒಬ್ಬರೂ ಆಸಕ್ತಿ ತೋರಿಸಿಲ್ಲ. ಹಾಗಾಗಿ ಸದ್ಯದಲ್ಲೇ ಮರು ಟೆಂಡರ್‌ ಆಹ್ವಾನಿಸಲಾಗುತ್ತದೆ’ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವರ್ಷದ ಬಜೆಟ್ ಭಾಷಣದಲ್ಲಿ ಮೀನುಗಾರಿಕಾ ಬಂದರುಗಳ ಹೂಳೆತ್ತಲು ಅನುದಾನ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದರು. ಅದರಂತೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಒಟ್ಟು ಎಂಟು ಬಂದರುಗಳಿಂದ ಕೆಸರನ್ನು ತೆರವು ಮಾಡಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.

ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಕವಿತಾ ಆರ್.ಕೆ ಪ್ರತಿಕ್ರಿಯಿಸಿ, ‘ಜಿಲ್ಲೆಯ ಪ್ರಮುಖ ಬಂದರುಗಳಿಂದ ಹೂಳೆತ್ತುವ ಕಾರ್ಯವನ್ನು ಹಂತಹಂತವಾಗಿ ಮಾಡಲಾಗುತ್ತದೆ. ಇಲಾಖೆಯ ಕೇಂದ್ರ ಕಚೇರಿಯಿಂದ ಬಂದರು ಇಲಾಖೆಯ ಎಂಜಿನಿಯರಿಂಗ್ ವಿಭಾಗಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಸಿ.ಆರ್.ಝೆಡ್ ಸಮಿತಿಯಿಂದ ನಿರಾಕ್ಷೇಪಣಾ ಪತ್ರಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಮೂಲ ಸೌಕರ್ಯ ಕೊಡಿ’:

‘ಬೈತಖೋಲ್ ಮೀನುಗಾರಿಕಾ ಬಂದರಿನ ಜಟ್ಟಿಯನ್ನು ವಿಸ್ತರಣೆ ಮಾಡಿ ಸುಮಾರು ಐದು ವರ್ಷಗಳಾಗಿವೆ. ಅಂದಿನಿಂದಲೂ ಬಂದರಿನ ಹೂಳೆತ್ತಿಲ್ಲ. ಕಾಮಗಾರಿ ಹಮ್ಮಿಕೊಂಡು ದೋಣಿಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಪದೇಪದೆ ಮನವಿಗಳನ್ನು ಸಲ್ಲಿಸುತ್ತಲೇ ಬಂದಿದ್ದೇವೆ. ಈಗಲಾದರೂ ಪ್ರಕ್ರಿಯೆ ಆರಂಭಿಸುತ್ತಿರುವುದು ಸಂತಸದ ಸಂಗತಿ. ಅಮದಳ್ಳಿ, ತದಡಿ, ಹೊನ್ನಾವರ, ಬಂದರುಗಳಲ್ಲೂ ಹೂಳೆತ್ತಬೇಕು’ ಎಂದು ಟ್ರಾಲ್ ಬೋಟ್ ಮಾಲೀಕರ ಸಂಘದ ಸದಸ್ಯ ಶ್ರೀಧರ ಹರಿಕಂತ್ರ ಹೇಳಿದರು.

‘ಬೈತಖೋಲ್ ಬಂದರಿನಲ್ಲಿ ಮೀನುಗಾರರ ವಿಶ್ರಾಂತಿಗೆ ಶೆಡ್ ಇಲ್ಲ. ಶೌಚಾಲಯಕ್ಕೆ ನೀರಿನ ಸಮಸ್ಯೆಯಿದೆ. ಬಂದರು ಪ್ರದೇಶದಲ್ಲಿ ರಾತ್ರಿ ಬೆಳಕಿನ ಕೊರತೆಯಿದೆ. ಇವುಗಳನ್ನೂ ಸರಿಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

––––

* ಬಂದರುಗಳಿಂದ ಹೂಳೆತ್ತುವ ಕಾಮಗಾರಿಯು ಹಂತಹಂತವಾಗಿ ನಡೆಯಲಿದೆ. ಜಿಲ್ಲೆಯ ಉಳಿದ ಬಂದರುಗಳಲ್ಲಿ ಮುಂದಿನ ವರ್ಷ ಕಾಮಗಾರಿ ಹಮ್ಮಿಕೊಳ್ಳಲಾಗುತ್ತದೆ.

– ಕವಿತಾ ಕೆ.ಆರ್, ಉಪ ನಿರ್ದೇಶಕಿ, ಮೀನುಗಾರಿಕಾ ಇಲಾಖೆ

* ಕಾಮಗಾರಿ ನಡೆಸಲು ಆಯ್ಕೆಯಾದ ಗುತ್ತಿಗೆದಾರರಿಗೆ ಹೂಳೆತ್ತಲು ಮಳೆಗಾಲದ ಅವಧಿಯೂ ಸೇರಿ ಒಂದು ವರ್ಷದ ಕಾಲಾವಧಿ ನೀಡಲಾಗುತ್ತದೆ.

– ತಾರಾನಾಥ ರಾಥೋಡ್, ಇ.ಇ, ಬಂದರು ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.