ADVERTISEMENT

ಶಿರಸಿ: ಅಪಾಯಕಾರಿ ಸ್ಥಳಗಳಲ್ಲಿ ಎಚ್ಚರಿಕೆ ಫಲಕ

ಶಿರಸಿ ಗ್ರಾಮೀಣ ಠಾಣೆ ಪೊಲೀಸರಿಂದ ಜಾಗೃತಿ ಮೂಡಿಸುವ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 15:41 IST
Last Updated 13 ಜನವರಿ 2022, 15:41 IST
ಶಿರಸಿ ತಾಲ್ಲೂಕಿನ ಪಾಂಡವರಹೊಳೆ ಸಮೀಪ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಅಳವಡಿಸಿರುವ ಎಚ್ಚರಿಕೆ ಫಲಕ
ಶಿರಸಿ ತಾಲ್ಲೂಕಿನ ಪಾಂಡವರಹೊಳೆ ಸಮೀಪ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಅಳವಡಿಸಿರುವ ಎಚ್ಚರಿಕೆ ಫಲಕ   

ಶಿರಸಿ: ನದಿ, ಜಲಪಾತಗಳ ಅಪಾಯಕಾರಿ ಸ್ಥಳಗಳಲ್ಲಿ ಜನರು ಈಜಲು ತೆರಳಿ ಜೀವ ಕಳೆದುಕೊಳ್ಳುವುದನ್ನು ತಡೆಯಲು ಗ್ರಾಮೀಣ ಠಾಣೆ ಪೊಲೀಸರು ಎಚ್ಚರಿಕೆ ಫಲಕ ಅಳವಡಿಸಿದ್ದಾರೆ.

ತಾಲ್ಲೂಕಿನ ಕೆಂಗ್ರೆ ಹೊಳೆ, ಪಾಂಡವರಹೊಳೆ, ದೇವರಹೊಳೆ ಸೇರಿದಂತೆ ಐದಕ್ಕೂ ಹೆಚ್ಚು ಕಡೆಗಳಲ್ಲಿ ಅಪಾಯ ಸೂಚಿಸುವ ಫಲಕಗಳ ಅಳವಡಿಕೆಯಾಗಿದೆ. ಸಾರ್ವಜನಿಕರು ಪಿಕ್‍ನಿಕ್‍ಗೆ ಬರುವ ಸ್ಥಳಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿಯೂ ಎಚ್ಚರಿಕೆ ಫಲಕ ಹಾಕಲಾಗುತ್ತಿದೆ. ಅಲ್ಲಿ ಈಜು ಚಟುವಟಿಕೆ ನಡೆಸದಂತೆ ತಿಳಿವಳಿಕೆ ಮೂಡಿಸುವ ಬರಹ ಫಲಕದಲ್ಲಿದೆ.

ಈಚಿನ ದಿನಗಳಲ್ಲಿ ಕೆಂಗ್ರೆ ಹೊಳೆ, ಪಾಂಡವರಹೊಳೆ ಮುಂತಾದೆಡೆ ಶಾಲಾ–ಕಾಲೇಜು ವಿದ್ಯಾರ್ಥಿಗಳು ಮೋಜಿಗೆ ತೆರಳುವುದು ಹೆಚ್ಚುತ್ತಿದೆ. ಮುರೇಗಾರ ಜಲಪಾತ ಸೇರಿದಂತೆ ಇನ್ನಿತರ ಜಲಪಾತಗಳಿರುವ ಪ್ರದೇಶದಲ್ಲೂ ಯುವಕರ ಮೋಜು ಹೆಚ್ಚಿದೆ. ಇವುಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದಲೂ ಫಲಕ ಅಳವಡಿಸಲಾಗುತ್ತಿದೆ.

ADVERTISEMENT

‘ನದಿಯ ಆಳ ಅರಿಯದೆ ಈಜಲು ಹೋಗಿ ಅಪಾಯಕ್ಕೆ ಗುರಿಯಾಗುವ ಪ್ರಕರಣಗಳು ನಡೆದಿದೆ. ಈಚೆಗೆ ವಿದ್ಯಾರ್ಥಿಯೊಬ್ಬ ಮೃತಪಟ್ಟ ನಂತರ ಇನ್ನಷ್ಟು ಎಚ್ಚರಿಕೆ ವಹಿಸಿದ್ದೇವೆ. ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅಲ್ಲಿ ಮಾತ್ರ ಫಲಕ ಅಳವಡಿಸಲಾಗಿದೆ’ ಎಂದು ಗ್ರಾಮೀಣ ಠಾಣೆ ಪಿಎಸ್‌ಐ ಡಿ.ಎಸ್.ಈರಯ್ಯ ತಿಳಿಸಿದರು.

‘ವಾರಾಂತ್ಯದ ಸಂದರ್ಭದಲ್ಲಿ ಮೋಜು–ಮಸ್ತಿ ಮಾಡುವ ನೆಪದಲ್ಲಿ ಯುವಕರು ಗ್ರಾಮೀಣ ಭಾಗದ ಹೊಳೆ, ಜಲಪಾತಗಳಿಗೆ ತಂಡೋಪತಂಡವಾಗಿ ತೆರಳುತ್ತಿದ್ದಾರೆ. ಅನೈತಿಕ ಚಟುವಟಿಕೆ ನಡೆಸಿ ಸ್ಥಳೀಯರಿಗೆ ತೊಂದರೆ ಉಂಟು ಮಾಡುವ ದೂರುಗಳು ಬಂದಿವೆ. ಇವುಗಳಿಗೆ ನಿಯಂತ್ರಣ ಹೇರಲು ಪೊಲೀಸ್‌ ಬೀಟ್ ವ್ಯವಸ್ಥೆ ಬಲಪಡಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.