
ಶಿರಸಿ: ಅರಣ್ಯ ಇಲಾಖೆಯು ನರೇಗಾ ಯೋಜನೆಯಡಿ ಅರಣ್ಯೀಕರಣ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಲಕ್ಷ್ಯ ಧೋರಣೆ ತೋರುತ್ತಿರುವ ಕಾರಣ ಯೋಜನೆಯ ಮೂಲೋದ್ದೇಶವಾದ ಅರಣ್ಯೀಕರಣ ಹಾಗೂ ರೈತರ ಆರ್ಥಿಕ ಸ್ಥಿತಿ ಸುಧಾರಣೆ ಮರೀಚಿಕೆಯಾಗಿದೆ ಎಂದು ದೂರು ತಾಲ್ಲೂಕಿನೆಲ್ಲೆಡೆ ಕೇಳಿ ಬರುತ್ತಿದೆ.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿ ವೈಯಕ್ತಿಕ ಜೀವನೋಪಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಂಯೋಜನೆಯಲ್ಲಿ ಅರಣ್ಯೀಕರಣ ಚಟುವಟಿಕೆ ಕಾರ್ಯಗತಗೊಳಿಸಲು ಸರ್ಕಾರದ ಸೂಚನೆಯಿದೆ. ಆದರೆ ಶಿರಸಿ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯು ಯೋಜನೆಯ ಬಗ್ಗೆ ತೀರಾ ನಿರ್ಲಕ್ಷ್ಯ ಭಾವನೆ ತಳೆದಿದೆ’ ಎಂಬ ದೂರು ಕೆಡಿಪಿಗಳಲ್ಲಿ ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿಯೇ ವ್ಯಕ್ತವಾಗುತ್ತಿವೆ.
‘ಬನವಾಸಿ ವಲಯದಲ್ಲಿ ಶೇ 76, ಶಿರಸಿ ಸಾಮಾಜಿಕ ಅರಣ್ಯ ವಿಭಾಗದಲ್ಲಿ ಶೇ 83, ಹುಲೇಕಲ್ ವಿಭಾಗದಲ್ಲಿ ಗುರಿ ಮೀರಿದ ಸಾಧನೆಯಾಗಿದೆ. ಆದರೆ ತಾಲ್ಲೂಕಿನ ಜಾನ್ಮನೆ, ಶಿರಸಿ ಅರಣ್ಯ ವಲಯಗಳಲ್ಲಿ ಅಕ್ಟೋಬರ್ ಅಂತ್ಯದವರೆಗೆ ನಿಗದಿಪಡಿಸಿರುವ ಗುರಿಯಲ್ಲಿ ಶೇಕಡಾ 10ರಷ್ಟು ಪ್ರಗತಿಯಾಗಿಲ್ಲ. ಹೀಗೆ ಮಾನವ ದಿನ ಸೃಜಿಸದೇ ಇದ್ದರೆ ಯೋಜನೆ ಉದ್ದೇಶ ಈಡೇರದು’ ಎಂಬುದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಆತಂಕವಾಗಿದೆ.
‘ಯೋಜನೆಯಡಿ ಅರಣ್ಯ ಇಲಾಖೆಯು ರೈತರ ಭೂಮಿಯಲ್ಲಿ ವೈಯಕ್ತಿಕ ಕೆಲಸಗಳಿಗಾಗಿ (ಕೃಷಿ ಅರಣ್ಯ), ಜೀವನೋಪಾಯ ಪೂರಕ ಚಟುವಟಿಕೆಗಳಿಗಾಗಿ (ಸಣ್ಣ ಅರಣ್ಯ ಉತ್ಪನ್ನಗಳು, ಜೈವಿಕ ಇಂಧನ, ಔಷಧೀಯ ಸಸ್ಯಗಳು) ತೋಟಗಳನ್ನು ಅಭಿವೃದ್ಧಿಪಡಿಸುವ ಮೂಲಕ ದನಗಳು ಮತ್ತು ಪಕ್ಷಿಗಳಿಗೆ ಆಹಾರವನ್ನು ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಂಗುಗುಂಡಿಗಳ ನಿರ್ಮಾಣ, ಸಸ್ಯ ನಾಟಿಯನ್ನೂ ಮಾಡಬೇಕು. ಆದರೆ ಹಲವು ಬಾರಿ ಸೂಚನೆ ನೀಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ.
‘ನರೇಗಾ ಅನುಷ್ಠಾನದಲ್ಲಿ ಅರಣ್ಯ ಇಲಾಖೆ ಹಿಂದೆ ಬಿದ್ದಿದೆ. ತಾಲ್ಲೂಕಿನಲ್ಲಿ ಅರಣ್ಯ ಭೂಮಿಯ ಪ್ರಮಾಣ ಹೆಚ್ಚಿದೆಯಾದರೂ ಅರಣ್ಯ ಇಲಾಖೆ ಕೆಲವೇ ಕಾಮಗಾರಿಗಳನ್ನು ಮಾತ್ರ ಕೈಗೊಂಡಿರುವ ಬಗ್ಗೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಮೇಲಧಿಕಾರಿಗಳಿಗೂ ತಾಲ್ಲೂಕು ಪಂಚಾಯಿತಿಯಿಂದ ಸೂಚನೆ ನೀಡಲಾಗಿದೆ. ಅತಿವೃಷ್ಟಿಯ ಕಾರಣಕ್ಕೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಕಷ್ಟು ವಿಳಂಬವಾಗಿದೆ. ನಿಗದಿತ ಸಮಯದಲ್ಲಿ ಗುರಿಪಡಿಸಿದ ಮಾನವ ದಿನಗಳ ಸೃಜನೆ ಮಾಡಲಾಗುವುದು’ ಎಂಬುದು ಅರಣ್ಯಾಧಿಕಾರಿಯೊಬ್ಬರ ಸ್ಪಷ್ಟನೆಯಾಗಿದೆ.
ನರೇಗಾ ಅನುಷ್ಠಾನದಲ್ಲಿ ಅರಣ್ಯ ಇಲಾಖೆ ಹಿನ್ನಡೆ ಶಿರಸಿ, ಜಾನ್ಮನೆ ವಲಯದಲ್ಲಿ ಶೇ.10ರಷ್ಟಿಲ್ಲ ಪ್ರಗತಿ
ತಾಲ್ಲೂಕಿನ ವಿವಿಧ ಭಾಗಗಳಲ್ಲಿ ನರೇಗಾ ಅನುಷ್ಠಾನದಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು.ಚನ್ನಬಸಪ್ಪ ಹಾವಣಗಿ ತಾಲ್ಲೂಕು ಪಂಚಾಯಿತಿ ಇಒ
ವಿವಿಧ ಕಾರ್ಯ ಕೈಗೊಳ್ಳಲು ಅವಕಾಶ ‘ನರೇಗಾದಡಿ ರಸ್ತೆಬದಿಯ ತೋಟ ಬ್ಲಾಕ್ ಪ್ಲಾಂಟೆಶನ್ ಸಮುದಾಯ ನೆಡುತೋಪು ಬಹು ವಾರ್ಷಿಕ ಮೇವಿನ ಅಭಿವೃದ್ಧಿ ನರ್ಸರಿ ಅಭಿವೃದ್ಧಿ ಗೋಮಾಳ ಅಭಿವೃದ್ಧಿ ವನ್ಯಜೀವಿ ಉಪ ಯೋಜನೆ ಪವಿತ್ರ ಅರಣ್ಯ ಕೃಷಿ ಅರಣ್ಯೀಕರಣ ಮಣ್ಣು ಮತ್ತು ಜಲ ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಗೆ ಅವಕಾಶವಿದೆ’ ಎಂಬುದು ನರೇಗಾ ಯೋಜನಾ ವಿಭಾಗದ ಅಧಿಕಾರಿಗಳ ಮಾಹಿತಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.