ADVERTISEMENT

ಮುಂಡಗೋಡ | ಜಿ ರಾಮ್ ಜಿ ಯೋಜನೆ ಹಿಂಪಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 5:23 IST
Last Updated 13 ಜನವರಿ 2026, 5:23 IST
ಮನರೇಗಾ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಆಗ್ರಹಿಸಿ, ಮುಂಡಗೋಡ ಪಟ್ಟಣದ ಶಿವಾಜಿ ವೃತ್ತದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದಿಂದ ಸೋಮವಾರ ಪ್ರತಿಭಟಿಸಲಾಯಿತು
ಮನರೇಗಾ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಆಗ್ರಹಿಸಿ, ಮುಂಡಗೋಡ ಪಟ್ಟಣದ ಶಿವಾಜಿ ವೃತ್ತದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದಿಂದ ಸೋಮವಾರ ಪ್ರತಿಭಟಿಸಲಾಯಿತು   

ಮುಂಡಗೋಡ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸರಳೀಕರಣ ಮಾಡಿ ಯೋಜನೆಯನ್ನು ಮುಂದುವರಿಸುವಂತೆ ತಾಲ್ಲೂಕು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದವರು ಮತ್ತು ವಿವಿಧ ಸಂಘಟನೆಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಶಂಕರ ಗೌಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ಕೇಂದ್ರ ಸರ್ಕಾರ ಮಹಾತ್ಮ ಗಾಂಧೀಜಿಗೆ ಅಗೌರವವನ್ನು ತೋರುವ ಮೂಲಕ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಶೇ30ರಷ್ಟು ಹಣವನ್ನು ಕಡಿತ ಮಾಡಿದೆ. ಅಲ್ಲದೇ, 60 ಮತ್ತು 40ರ ಅನುಪಾತದಲ್ಲಿ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಕಬೇಕೆಂದು ಕಾನೂನು ರೂಪಿಸಿದ್ದಾರೆ. ಈ ಎಲ್ಲ ವಿಷಯ ಪರಿಶೀಲಿಸಿದಾಗ, ರಾಜ್ಯ ಸರ್ಕಾರಗಳು ಈ ಹಣವನ್ನು ತುಂಬಲು ಸಾಧ್ಯವೇ ಇಲ್ಲ ಎನ್ನುವುದು ಮನವರಿಕೆಯಾಗುತ್ತದೆ. ಮನರೇಗಾ ಬಂದ್‌ ಮಾಡುವ ಉದ್ದೇಶದಿಂದಲೇ ಈ ರೀತಿಯಾಗಿ ಬೇಕಾಬಿಟ್ಟಿ ಕಾನೂನನ್ನು ಕೇಂದ್ರ ಸರ್ಕಾರ ರೂಪಿಸಿದ್ದು ಇದನ್ನು ಒಪ್ಪಲು ಆಗದು’ ಎಂದು ಪ್ರತಿಭಟನಾನಿರತರು ದೂರಿದರು.

‘ವಿಬಿಜಿ ರಾಮ್ ಜಿ ಯೋಜನೆಯನ್ನು ರದ್ದು ಮಾಡಿ, ಮೊದಲಿದ್ದ ಹಾಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಬೇಕು. ಯೋಜನೆಯನ್ನು ನಿಲ್ಲಿಸಿದರೆ ಬಡತನ, ನಿರುದ್ಯೋಗ ಸಮಸ್ಯೆ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮಸ್ಯೆ ಉದ್ಭವವಾಗುವುದರಲ್ಲಿ ಸಂದೇಹವಿಲ್ಲ. ಕೇಂದ್ರ ಸರ್ಕಾರ ಕೂಡಲೇ ಈ ಯೋಜನೆಯನ್ನು ಮೊದಲಿದ್ದ ಹಾಗೆ ಜಾರಿಗೆ ತಂದು ಗ್ರಾಮ ಪಂಚಾಯಿತಿಗಳಿಗೆ ಬಲ ನೀಡುವ ಮುಖಾಂತರ ಅಭಿವೃದ್ಧಿಗೆ ಕೈಜೋಡಿಸಬೇಕು. ಮಹಾತ್ಮ ಗಾಂಧೀಜಿಯ ಹೆಸರಿನ ನೈತಿಕ ಬಲವೂ ಇಲ್ಲದ ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿ ಮಾಡುತ್ತಿರುವುದು ಗ್ರಾಮೀಣ ಭಾರತದ ಆರ್ಥಿಕತೆಗೆ ನೀಡುತ್ತಿರುವ ಕೊಡಲಿ ಏಟಾಗಿದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಒಕ್ಕೂಟದ ಅಧ್ಯಕ್ಷ ಧರ್ಮರಾಜ ನಡಗೇರ, ಡಿಎಸ್ಎಸ್ ಅಂಬೇಡ್ಕರ್ ಧ್ವನಿಯ (ಚಂದ್ರಕಾಂತ ಕಾದ್ರೊಳ್ಳಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಸಂಗಮೇಶ್ವರ, ನರೇಗಾ ಕೂಲಿ ಕಾರ್ಮಿಕರ ಸಂಘ, ಮಹಿಳಾ ಹಾಗೂ ರೈತ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.