ADVERTISEMENT

ಭಾರಿ ದುರಂತ ತಪ್ಪಿಸಿದ ಸಿಬ್ಬಂದಿ ಸಮಯಪ್ರಜ್ಞೆ

ಭಟ್ಕಳ: ಬಸ್ ನಿಲ್ದಾಣದ ಸಮೀಪ ಭಾನುವಾರದಿಂದಲೇ ಯಾರೂ ಸುಳಿಯದಂತೆ ಮುನ್ನೆಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2018, 12:26 IST
Last Updated 16 ಜುಲೈ 2018, 12:26 IST
ಶಿಥಿಲಾವಸ್ಥೆ ತಲುಪಿದ್ದ ಭಟ್ಕಳ ಬಸ್‌ ನಿಲ್ದಾಣದಲ್ಲಿ ಕ್ಯಾಂಟೀನ್ ಇದ್ದ ಭಾಗದ ಗೋಡೆಯ ಒಂದು ಪಾರ್ಶ್ವವನ್ನು ಸಾರಿಗೆ ಸಂಸ್ಥೆ ಸಿಬ್ಬಂದಿ ಭಾನುವಾರವೇ ತೆರವುಗೊಳಿಸಿದ್ದರು
ಶಿಥಿಲಾವಸ್ಥೆ ತಲುಪಿದ್ದ ಭಟ್ಕಳ ಬಸ್‌ ನಿಲ್ದಾಣದಲ್ಲಿ ಕ್ಯಾಂಟೀನ್ ಇದ್ದ ಭಾಗದ ಗೋಡೆಯ ಒಂದು ಪಾರ್ಶ್ವವನ್ನು ಸಾರಿಗೆ ಸಂಸ್ಥೆ ಸಿಬ್ಬಂದಿ ಭಾನುವಾರವೇ ತೆರವುಗೊಳಿಸಿದ್ದರು   

ಭಟ್ಕಳ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಘಟಕದ ಸಿಬ್ಬಂದಿಯ ಸಮಯಪ್ರಜ್ಞೆ, ಸೋಮವಾರ ಭಾರಿ ಅನಾಹುತವನ್ನು ತಪ್ಪಿಸಿದೆ. ಇಲ್ಲಿನ ಬಸ್ ನಿಲ್ದಾಣದ ಒಂದು ಭಾಗವು ಕುಸಿಯಲಿದೆ ಎಂದು ಭಾನುವಾರವೇ ಅರಿತ ಅವರುಸುತ್ತಮುತ್ತ ಯಾರೂ ಸುಳಿಯದಂತೆ ನೋಡಿಕೊಂಡರು.

42 ವರ್ಷಗಳಷ್ಟು ಹಳೆಯದಾದಈ ಬಸ್‌ ನಿಲ್ದಾಣದ ಕ್ಯಾಂಟೀನ್ ಇದ್ದ ಭಾಗವು ಸೋಮವಾರ ಮಧ್ಯಾಹ್ನ 12.45ರ ಸುಮಾರಿಗೆ ಕುಸಿದು ಬಿತ್ತು. ಕಟ್ಟಡಶಿಥಿಲಾವಸ್ಥೆ ತಲುಪಿದ್ದನ್ನು ಗಮನಿಸಿದ್ದ ಸಿಬ್ಬಂದಿ, ಅದರ ಒಂದು ಭಾಗವನ್ನು ಭಾನುವಾರ ತೆರವು ಮಾಡಿದ್ದರು. ಬಳಿಕ ಸುತ್ತಮುತ್ತ ಯಾರೂ ಸುಳಿಯದಂತೆ ರಿಬ್ಬನ್ ಕಟ್ಟಿ ಎಚ್ಚರಿಕೆ ವಹಿಸಿದ್ದರು.

‘ಒಂದುವೇಳೆ ಮುನ್ನೆಚ್ಚರಿಕೆ ವಹಿಸದೇ ಇದ್ದಿದ್ದರೆ ಸಾರ್ವಜನಿಕರ ಜೀವಕ್ಕೆ, ಬಸ್‌ಗಳಿಗೆ ಹಾನಿಯಾಗುವ ಸಾಧ್ಯತೆಯಿತ್ತು. ಈ ಭಾಗದಲ್ಲಿ ಯಾರೂ ಬಾರದಂತೆ ತಡೆದ ಕಾರಣ ಸಂಭವನೀಯ ದುರಂತ ತಪ್ಪಿದೆ’ ಎಂದು ಪ್ರತ್ಯಕ್ಷದರ್ಶಿಯೂ ಆಗಿರುವ, ಆಟೊರಿಕ್ಷಾ ಚಾಲಕ– ಮಾಲೀಕರ ಸಂಘದಮುಖಂಡ ಗಣಪತಿ ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಕಟ್ಟಡದ ಕುಸಿದ ಭಾಗದಲ್ಲಿದ್ದ ಕ್ಯಾಂಟೀನ್ ಅನ್ನುಕೆಲವು ತಿಂಗಳ ಹಿಂದೆ ಮುಚ್ಚಲಾಗಿತ್ತು. ಆದರೆ, ಅದರಲ್ಲಿದ್ದ ಸಾಮಾನು ಸರಂಜಾಮುಗಳನ್ನು ಸೋಮವಾರ ಸಾಗಿಸಲಾಯಿತು. ಅದಾಗಿ ಕೆಲವೇ ನಿಮಿಷಗಳಲ್ಲಿ ಕಟ್ಟಡಕುಸಿದು ಬಿತ್ತು. ಇದನ್ನು ನೋಡಲು ನೋಡಲು ನೂರಾರು ಜನರು ಜಮಾಯಿಸಿದ್ದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಶೀಲ್ದಾರ್ ವಿ.ಎನ್.ಬಾಡಕರ್ ಮಾತನಾಡಿ, ‘ಶಿರಸಿಯಿಂದ ಸಂಸ್ಥೆಯಎಂಜಿನಿಯರ್‌ಗಳು ಬಂದಿದ್ದು,ಪರಿಶೀಲನೆ ನಡೆಸಿದ್ದಾರೆ. ಸಂಪೂರ್ಣ ಶಿಥಿಲಗೊಂಡಿರುವ ನಿಲ್ದಾಣದ ಕಟ್ಟಡವನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ಎಂದರು.

ಕಾಮಗಾರಿ ಶೀಘ್ರ ಮುಗಿಯಲಿ:ಸ್ಥಳ ಪರಿಶೀಲಿಸಿದ ಶಾಸಕ ಸುನೀಲ ನಾಯ್ಕ,ಹಳೆಯದಾದ ಕಟ್ಟಡವನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಈ ಹಿಂದೆಯೇ ಆದೇಶಿಸಿದ್ದರು. ಆದರೆ,ಸಂಸ್ಥೆಯ ಅಧಿಕಾರಿಗಳೇ ವಿಳಂಬ ಮಾಡಿದ್ದಾರೆ. ಹೊಸ ಬಸ್‌ನಿಲ್ದಾಣದ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಲು ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಕಟ್ಟಡ ತೆರವಿಗೆ ಸೂಚನೆ:‘ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಅದರಲ್ಲಿದ್ದ ಮಳಿಗೆಗಳನ್ನು ತೆರವು ಮಾಡುವಂತೆ ಮೇಲಧಿಕಾರಿಗಳು ಹಿಂದೆಯೇ ಸೂಚಿಸಿದ್ದರು. ಈಗ ಅದಾಗಿಯೇ ಕುಸಿದು ಬಿದ್ದಿದೆ. ಹೊಸ ಬಸ್ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಯಾಣಿಕರಿಗೆ ಯಾವುದೇ ಅನನುಕೂಲ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಸಂಸ್ಥೆಯ ಸ್ಥಳೀಯ ಘಟಕದ ವ್ಯವಸ್ಥಾಪಕ ವೈ.ಕೆ.ಬಾನಾವಳಿಕರ್ ಭರವಸೆ ನೀಡಿದ್ದಾರೆ.

130 ಬಸ್‌ಗಳ ಸಂಚಾರ:ಭಟ್ಕಳ ಬಸ್ ನಿಲ್ದಾಣದಿಂದ ಪ್ರತಿದಿನ 130 ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತವೆ. ಪ್ರತಿ ದಿನ ಸಾವಿರಾರು ಪ್ರಯಾಣಿಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಹಿಂದೆ ಡಿಪೊ ಇದ್ದ ಜಾಗವನ್ನೂ ಒಳಗೊಂಡು ಹೊಸ ಬಸ್ ನಿಲ್ದಾಣದ ಕಾಮಗಾರಿಯು ಸುಮಾರು ಐದು ತಿಂಗಳ ಹಿಂದೆ ಆರಂಭವಾಗಿದೆ. ಸದ್ಯ ಕಟ್ಟಡದ ಅಡಿಪಾಯ ಹಾಕುವ ಕೆಲಸ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.