ADVERTISEMENT

ಸರ್ಕಾರಕ್ಕೆ ‘ಗಡಿ’ ದಾಟುವ ದುಸ್ಥಿತಿ

ಗೋವಾದಲ್ಲಿ ಸಮೀಕ್ಷೆ ನಡೆಸಿದ ಅಧಿಕಾರಿಗಳು:ಕಮ್ಮರಗಾಂವ ನಿವಾಸಿಗಳ ಟೀಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:30 IST
Last Updated 30 ಸೆಪ್ಟೆಂಬರ್ 2025, 6:30 IST
ಗೋವಾ ರಾಜ್ಯದ ನೆತುರ್ಲಿಮ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾರವಾರ ತಾಲ್ಲೂಕಿನ ಕಮ್ಮರಗಾಂವ ಗ್ರಾಮದ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಪ್ರಕ್ರಿಯೆಯನ್ನು ನಡೆಸಲಾಯಿತು.
ಗೋವಾ ರಾಜ್ಯದ ನೆತುರ್ಲಿಮ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾರವಾರ ತಾಲ್ಲೂಕಿನ ಕಮ್ಮರಗಾಂವ ಗ್ರಾಮದ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಪ್ರಕ್ರಿಯೆಯನ್ನು ನಡೆಸಲಾಯಿತು.   

ಕಾರವಾರ: ‘ಐದು ತಿಂಗಳಿನಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆ ಸೌಲಭ್ಯ ಇಲ್ಲ. ಪಡಿತರ ಪಡೆಯಲು 70 ಕಿ.ಮೀ ದೂರ ಸಂಚರಿಸುವ ಸಮಸ್ಯೆ ನೀಗಿಸಲು ನೀಡಿದ ದೂರುಗಳಿಗೆ ಸ್ಪಂದಿಸಿಲ್ಲ. ಈಗ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ನಮ್ಮನ್ನು ಗೋವಾ ರಾಜ್ಯಕ್ಕೆ ಕರೆತಂದು ನಡೆಸುವ ಸ್ಥಿತಿ ರಾಜ್ಯದ ಆಡಳಿತ ವ್ಯವಸ್ಥೆಗೆ ಬಂದಿದೆ’.

ಹೀಗೆ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವರು ಕಾರವಾರ ತಾಲ್ಲೂಕಿನ ಕಮ್ಮರಗಾಂವ ಗ್ರಾಮದ ಸದಾನಂದ ವೇಳಿಪ. ‘ಉದ್ಯೋಗ, ಆರೋಗ್ಯ ಸೌಕರ್ಯಕ್ಕಾಗಿ ಗೋವಾ ರಾಜ್ಯ ಅವಲಂಬಿಸಬೇಕಾದ ಸ್ಥಿತಿ ಇದೆ. ನಮಗೆ ಹೇಳಿಕೊಳ್ಳಲಷ್ಟೇ ಕರ್ನಾಟಕದ ದಾಖಲೆಗಳಿವೆ. ಸರ್ಕಾರದ ಸೌಲಭ್ಯ ಮಾತ್ರ ಶೂನ್ಯ. ಶಿಕ್ಷಣ, ಆರೋಗ್ಯಕ್ಕೆ ಗೋವಾ ಅವಲಂಬಿಸಿದ್ದೇವೆ. ದಾಖಲೆ ಇದ್ದರೂ ಬಳಕೆಗೆ ಬರುತ್ತಿಲ್ಲ’ ಎಂದು ಬೇಸರದಿಂದ ಹೇಳಿದರು. ಇದು ಅವರೊಬ್ಬರಷ್ಟೇ ಅಲ್ಲ, ಉದ್ಯೋಗಕ್ಕೆ ಗೋವಾದಲ್ಲಿ ನೆಲೆಸಿದ ಗ್ರಾಮದ ಹಲವರದ್ದೂ ಇದೇ ಅಭಿಪ್ರಾಯ.

ಗೋಟೆಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ 32 ಕುಟುಂಬಗಳ ಪೈಕಿ 24 ಕುಟುಂಬಗಳ ಸಮೀಕ್ಷೆಯನ್ನು ಗ್ರಾಮದಿಂದ 20 ಕಿ.ಮೀ ದೂರದಲ್ಲಿರುವ, ಗೋವಾ ರಾಜ್ಯದ ನೆತುರ್ಲಿಮ್‌ ಗ್ರಾಮ ಪಂಚಾಯಿತಿ ಸಭಾಂಗಣಲ್ಲಿ ನಡೆಯಿತು. 4 ವಾಹನಗಳಲ್ಲಿ ಜನರನ್ನು ಕರೆತರಲಾಯಿತು. ತಹಶೀಲ್ದಾರ್ ನಿಶ್ಚಲ್ ನೊರ‍್ಹೋನಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೀರನಗೌಡರ ಏಗನಗೌಡರ ಸಮೀಕ್ಷೆ ಪ್ರಕ್ರಿಯೆ ನಡೆಸಿದರು.

ADVERTISEMENT

‘ಗ್ರಾಮದಲ್ಲಿ ಕೆಲ ವರ್ಷಗಳ ಹಿಂದೆಯೇ ಮುಚ್ಚಿದ ಶಾಲೆ ಚುನಾವಣೆ ವೇಳೆ ಮತಗಟ್ಟೆಯಾಗಿ ಬಳಕೆ ಆಗುತ್ತಿದೆ. ಚುನಾವಣೆ ಬಂದಾಗಲಷ್ಟೆ ಗ್ರಾಮಕ್ಕೆ ಅಧಿಕಾರಿಗಳು ಬರುತ್ತಾರೆ. ಈಗ ಸಮೀಕ್ಷೆಯ ಮಾಹಿತಿ ನೀಡಲು ಎರಡು ದಿನದ ಹಿಂದೆ ಬಂದಿದ್ದರು. ಮಾಹಿತಿ ಸಂಗ್ರಹಿಸಲು ಮುಂದಾದ ಆಸಕ್ತಿಯನ್ನು ಸರ್ಕಾರ ಗ್ರಾಮಕ್ಕೆ ಸೌಲಭ್ಯ ಒದಗಿಸಲೂ ತೋರಿಸಲಿ’ ಎಂದು ಖಾರವಾಗಿ ಹೇಳಿದರು.

ಸೌಕರ್ಯಕ್ಕೆ ನಿಯಮಾವಳಿ ಅಡ್ಡಿ ‘

ಕಮ್ಮರಗಾಂವ ಗ್ರಾಮಕ್ಕೆ 8 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಸಾಗಬೇಕು. ಕದ್ರಾ ವನ್ಯಜೀವಿ ವಲಯದ ದಟ್ಟಾರಣ್ಯ ಗುಡ್ಡಗಳನ್ನು ಏರಿ ಸಾಗಬೇಕು. ರಸ್ತೆ ಮಾಡಿಕೊಡಲು ನಿಯಮಾವಳಿ ಅಡ್ಡಿಯಾಗುತ್ತಿದೆ. ಗ್ರಾಮದ ಜನರು ವರ್ಷದಲ್ಲಿ 6 ತಿಂಗಳು ವಿದ್ಯುತ್ ಸಂಪರ್ಕ ಕಾಣುವುದಿಲ್ಲ. ಸೌರವಿದ್ಯುತ್ ಕೂಡ ಇಲ್ಲಿ ಕೆಲಸ ಮಾಡುವುದಿಲ್ಲ. ಜನರ ಸಮಸ್ಯೆ ಸರ್ಕಾರದ ಗಮನಕ್ಕೆ ತರುವುದಷ್ಟೇ ಕೆಲಸವಾಗಿದೆ. ಯಾವುದೇ ಪರಿಹಾರ ಸಿಗುತ್ತಿಲ್ಲ’ ಎಂದು ಗೋಟೆಗಾಳಿ ಗ್ರಾಮ ಪಂಚಾಯಿತಿಯ ಕಮ್ಮರಗಾಂವ ವಾರ್ಡ್ ಸದಸ್ಯ ಅನಿಲ ಗಾಂವಕರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.