ADVERTISEMENT

‘ಮರಳು ಅಕ್ರಮ ಸಾಗಣೆಗೆ ತಂಡವೇ ಹೊಣೆ’

ಜೊಯಿಡಾ: ಅಧಿಕಾರಿಗಳೊಂದಿಗೆ ಸಭೆಯಲ್ಲಿ ತಹಶೀಲ್ದಾರ್ ಸಂಜಯ ಕಾಂಬಳೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 16:57 IST
Last Updated 29 ಸೆಪ್ಟೆಂಬರ್ 2020, 16:57 IST
ಅನಧಿಕೃತ ಮರಳು ಗಣಿಗಾರಿಕೆಯನ್ನು ನಿಯಂತ್ರಿಸುವ ಬಗ್ಗೆ ಜೊಯಿಡಾ ತಹಸೀಲ್ದಾರ್‌ ಸಂಜಯ ಕಾಂಬಳೆ ನೇತೃತ್ವದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಯಿತು
ಅನಧಿಕೃತ ಮರಳು ಗಣಿಗಾರಿಕೆಯನ್ನು ನಿಯಂತ್ರಿಸುವ ಬಗ್ಗೆ ಜೊಯಿಡಾ ತಹಸೀಲ್ದಾರ್‌ ಸಂಜಯ ಕಾಂಬಳೆ ನೇತೃತ್ವದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಯಿತು   

ಜೊಯಿಡಾ: ‘ತಾಲ್ಲೂಕಿನಲ್ಲಿ ಮರಳು ಸಂಗ್ರಹಕ್ಕೆ ಯಾರ್ಡ್ ನಿರ್ಮಿಸಲಾಗುತ್ತದೆ. ಅನಧಿಕೃತವಾಗಿ ಮರಳು ಗಣಿಗಾರಿಕೆಗೆ ಯಾವುದೇ ಅವಕಾಶವಿಲ್ಲ. ಅದಕ್ಕಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಸಮಿತಿ ರಚಿಸಿ ನಿಗಾ ಇಡಲಾಗುತ್ತಿದೆ’ ಎಂದು ತಹಶೀಲ್ದಾರ್ ಸಂಜಯ ಕಾಂಬಳೆ ಹೇಳಿದರು.

ಅನಧಿಕೃತ ಮರಳು ಗಣಿಗಾರಿಕೆಯನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ಮರಳು ನಿಕ್ಷೇಪ ಇರುವ ವಿವಿಧ ಭಾಗಗಳಿಗೆ ಒಂದೊಂದು ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳ ನಿಗಾ ವಹಿಸಲಾಗಿದೆ. ಒಂದು ವಾರದ ಒಳಗೆ ಮರಳು ನಿಕ್ಷೇಪ ಇರುವ ಪ್ರದೇಶಗಳನ್ನು ಗುರುತಿಸಿ ತಾಲ್ಲೂಕು ಸಮಿತಿಗೆ ತಿಳಿಸಬೇಕು. ಮರಳು ಅನಧಿಕೃತವಾಗಿ ಸಾಗಾಟವಾದರೆ ಆಯಾ ಅಧಿಕಾರಿಗಳೇ ಜವಾಬ್ದಾರರು. ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿದರೆ ಪ್ರಕರಣ ದಾಖಲಿಸುವ ಅಧಿಕಾರ ಅರಣ್ಯ ಇಲಾಖೆಗೆ ಇದೆ’ ಎಂದು ಅವರು ಹೇಳಿದರು.

ADVERTISEMENT

ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಹರೀಶ ಕೆ. ಎಸ್. ಮಾತನಾಡಿ, ‘ರಾಜ್ಯ ಸರ್ಕಾರ ಹೊಸ ಮರಳು ನೀತಿ ಜಾರಿಗೆ ತಂದಿದೆ. ನದಿ ಪಾತ್ರವನ್ನು ಎರಡು ಶ್ರೇಣಿಗಳಲ್ಲಿ ವಿಂಗಡಿಸಲಾಗಿದೆ. ಮೊದಲನೆಯದಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮರಳು ದಿಣ್ಣೆಗಳನ್ನು ಗುರುತಿಸಿ ಮರಳು ಬಳಕೆಗೆ ಅರ್ಜಿ ಸಲ್ಲಿಸಿದ ವ್ಯಕ್ತಿಯಿಂದ ಗ್ರಾಮ ಪಂಚಾಯ್ತಿ ದರ ಕಟ್ಟಿಸಿಕೊಳ್ಳಬಹುದು. ಪಾಸ್ ಮೂಲಕ ಅವರೇ ಸ್ವಂತ ಖರ್ಚಿನಲ್ಲಿ ಉಸುಕು ತೆಗೆಯಲು ಅವಕಾಶವಿದೆ’ ಎಂದರು.

‘ಗ್ರಾಮ ಪಂಚಾಯ್ತಿ ಇದರ ಮೇಲುಸ್ತುವಾರಿ ಮಾಡಬೇಕು. ಎರಡನೇ ಶ್ರೇಣಿಯಲ್ಲಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗುರುತಿಸಲಾದ ಉತ್ತಮ ಗುಣಮಟ್ಟದ ಮರಳನ್ನು ತಾಲ್ಲೂಕು ಸಮಿತಿಗೆ ತಿಳಿಸಬೇಕು. ತಾಲ್ಲೂಕು ಸಮಿತಿಯು ಜಿಲ್ಲಾ ಸಮಿತಿಗೆ ತಿಳಿಸಿ, ಮರಳು ಗಣಿಗಾರಿಕೆ ನಡೆಸಲು ಖಾಸಗಿ ಏಜೆನ್ಸಿಯನ್ನು ನೇಮಿಸಲಾಗುತ್ತದೆ. ಇದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಬೇಕು’ ಎಂದು ವಿವರಿಸಿದರು.

ಜೊಯಿಡಾ ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಬಾಬಾ ಸಾಹೇಬ್ ಹುಲ್ಲಣ್ಣನವರ, ರಾಮನಗರ ಇನ್‌ಸ್ಪೆಕ್ಟರ್ ಕಿರಣ ಪಾಟೀಲ, ಜೊಯಿಡಾ ಇನ್‌ಸ್ಪೆಕ್ಟರ್ ಲಕ್ಷ್ಮಣ ಪೀಜಾರ, ತಾಲ್ಲೂಕು ಪಂಚಾಯ್ತಿ ವ್ಯವಸ್ಥಾಪಕ ಜಿ.ವಿ.ಭಟ್ಟ, ಅರಣ್ಯ, ಲೋಕೋಪಯೋಗಿ, ಕಂದಾಯ ಇಲಾಖೆಯ ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.