ADVERTISEMENT

ನರೇಂದ್ರ ಮೋದಿ ಜೊತೆ ಫೋಟೊ: ಸೈನಿಕನೆಂದು ₹ 33 ಸಾವಿರ ವಂಚನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 9:02 IST
Last Updated 18 ಫೆಬ್ರುವರಿ 2020, 9:02 IST
ಫೇಸ್‌ಬುಕ್‌ನ ನಕಲಿ ಖಾತೆಗೆ ಬಳಸಿದ ಮೋದಿ ಜೊತೆಗಿನ ಸೈನಿಕನ ಫೋಟೋ ಹಾಗೂ ಮಾರಾಟಕ್ಕಿದೆ ಎನ್ನಲಾದ ಕಾರುಗಳು ಹಾಗೂ ವಂಚನೆಗೆ ಬಳಸಿದ ಕಾಗದ ಪತ್ರಗಳು
ಫೇಸ್‌ಬುಕ್‌ನ ನಕಲಿ ಖಾತೆಗೆ ಬಳಸಿದ ಮೋದಿ ಜೊತೆಗಿನ ಸೈನಿಕನ ಫೋಟೋ ಹಾಗೂ ಮಾರಾಟಕ್ಕಿದೆ ಎನ್ನಲಾದ ಕಾರುಗಳು ಹಾಗೂ ವಂಚನೆಗೆ ಬಳಸಿದ ಕಾಗದ ಪತ್ರಗಳು   

ಕಾರವಾರ: ‘ಫೇಸ್‌ಬುಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯೊಂದಿಗಿನ ಫೋಟೊ ಪ್ರಕಟಿಸಿಕೊಂಡು, ತಾನು ಸೈನಿಕ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, ಕಾರು ಮಾರಾಟದ ನೆಪದಲ್ಲಿ ₹ 33ಸಾವಿರ ಆನ್‌ಲೈನ್ವಂಚನೆ ಎಸಗಿದ್ದಾನೆ’ ಎಂದು ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ರಾಘು ನಾಯ್ಕ ಸೋಮವಾರ ಇಲ್ಲಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಅನ್ನಪೂರ್ಣ ಹೆಸರಿನ ಫೇಸ್‌ಬುಕ್ ಖಾತೆ ಬಳಸಿದ್ದ ವ್ಯಕ್ತಿ, ತಾನು ಬೆಂಗಳೂರಿನವನಾಗಿದ್ದು, ಜಮ್ಮು ಕಾಶ್ಮೀರಕ್ಕೆವರ್ಗಾವಣೆಯಾಗಿರುವ ಕಾರಣ ಅಲ್ಲಿಗೆ ತುರ್ತು ತೆರಳಬೇಕಾಗಿದೆ. ತನ್ನ ಬಳಿಯಿರುವ ನಾಲ್ಕು ಕಾರು ಮಾರಾಟ ಮಾಡುವುದಾಗಿ, ಕಾರಿನ ಚಿತ್ರದೊಂದಿಗೆ ದೂರವಾಣಿ ಸಂಖ್ಯೆ ಹಾಕಿದ್ದ. ಕಾರು ಖರೀದಿಗೆ ಆಸಕ್ತಿ ತೋರಿದ ನನ್ನ ಅಣ್ಣ ವಿನಾಯಕ ನಾಯ್ಕ, ಆ ಸಂಖ್ಯೆಗೆ ಕರೆ ಮಾಡಿದ್ದರು’ ಎಂದರು.

‘ಮುಂಚಿತ ನೋಂದಣಿಗೆ ₹ 11,500 ಪಾವತಿಸುವಂತೆ ಹೇಳಿದ್ದ ವ್ಯಕ್ತಿ, ಇನ್ನು ಮೂರು ಕಾರು ಅಂಕೋಲಾ, ಕುಮಟಾದಲ್ಲಿ ಬುಕ್‌ ಆಗಿರುವುದರಿಂದ ಎಲ್ಲ ವಾಹನಗಳನ್ನು ಮಿಲಿಟರಿ ವಾಹನದಲ್ಲಿ ಫೆ.7ರಂದು ತರಲಾಗುವುದು ಎಂದಿದ್ದ. ಕಾರು ತರುವ ದಿನ ಮತ್ತೆ ಕರೆ ಮಾಡಿ, ₹ 21,500 ಮೊತ್ತ ಪಾವತಿಸುವಂತೆ ಹೇಳಿದ. ಹೇಗೂ ಒಂದು ತಾಸಿನಲ್ಲಿ ಕಾರು ಕೈಗೆ ಸಿಗುವುದೆಂಬ ವಿಶ್ವಾಸದಿಂದ ಎಲ್ಲ ಹಣವನ್ನೂ ಗೂಗಲ್ ಪೇ ಮಾಡಲಾಯಿತು. ಸ್ವಲ್ಪ ಹೊತ್ತಿಗೆ ಮತ್ತೆ ಕರೆ ಮಾಡಿ, ಹಣ ಹಾಕುವಂತೆ ಒತ್ತಾಯಿಸಿದ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ, ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಸೈಬರ್ ಕ್ರೈಂ ದೂರು ದಾಖಲಿಸಲಾಗಿದೆ. ಪ್ರಧಾನಿ ಹಾಗೂ ಸೈನಿಕರ ಹೆಸರಿನಲ್ಲಿ ವಂಚನೆ ನಡೆದಿರುವ ಬಗ್ಗೆ ಪ್ರಧಾನಿಗೂ ಪತ್ರ ಬರೆಯಲಾಗಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.