ADVERTISEMENT

ಶಿರಸಿ: ನೈಸರ್ಗಿಕ ಅರಣ್ಯದಲ್ಲಿ ಅಕೇಶಿಯಾ ನೆಡುತೋಪು, ಸ್ಥಳೀಯ ನಿವಾಸಿಗಳ ವಿರೋಧ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 14:20 IST
Last Updated 26 ಜೂನ್ 2020, 14:20 IST
ಶಿರಸಿ ತಾಲ್ಲೂಕಿನ ನೇರ್ಲವಳ್ಳಿ ಮತ್ತಿಗಾರ ಗ್ರಾಮಸ್ಥರು ಡಿಸಿಎಫ್ ಎಸ್.ಜಿ.ಹೆಗಡೆ ಅವರಿಗೆ ಮನವಿ ಸಲ್ಲಿಸಿದರು
ಶಿರಸಿ ತಾಲ್ಲೂಕಿನ ನೇರ್ಲವಳ್ಳಿ ಮತ್ತಿಗಾರ ಗ್ರಾಮಸ್ಥರು ಡಿಸಿಎಫ್ ಎಸ್.ಜಿ.ಹೆಗಡೆ ಅವರಿಗೆ ಮನವಿ ಸಲ್ಲಿಸಿದರು   

ಶಿರಸಿ: ತಾಲ್ಲೂಕಿನ ನೇರ್ಲವಳ್ಳಿ ಮತ್ತಿಗಾರ ಗ್ರಾಮದ ನೈಸರ್ಗಿಕ ಅರಣ್ಯ ಪ್ರದೇಶದಲ್ಲಿ ಇಲಾಖೆ ಅಕೇಶಿಯಾ ಬೆಳೆಸಲು ಸಿದ್ಧತೆ ನಡೆಸಿರುವುದನ್ನು ವಿರೋಧಿಸಿ, ಸ್ಥಳೀಯರು ಶುಕ್ರವಾರ ಉಪಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.

ಇಲ್ಲಿಯ ಸರ್ವೆಸಂಖ್ಯೆ 312, 15 ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಅಕೇಶಿಯಾ ಗಿಡ ನೆಡಲಾರಂಭಿಸಿದೆ. ಈ ಪ್ರದೇಶವು ಕಾಡುಕೋಣ, ಜಿಂಕೆ ಇನ್ನಿತರ ಪ್ರಾಣಿಗಳ ವಾಸಸ್ಥಾನವಾಗಿದೆ. ಇಲ್ಲಿ ಅಕೇಶಿಯಾ ನಾಟಿ ಮಾಡುವುದರಿಂದ ಪರಿಸರ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಎಂದರು.

ಸ್ಥಳೀಯ ನಿವಾಸಿ ರಾಜೀವ ಹೆಗಡೆ ಮರ್ಲಮನೆ ಮಾತನಾಡಿ, ‘ಸ್ಥಾನಿಕ ಜಾತಿಯ ಮತ್ತಿ, ಹೊನಗಲು, ಹಣ್ಣಿನ ಗಿಡಗಳನ್ನು ನಾಟಿ ಮಾಡುವಂತೆ ಸ್ಥಳೀಯರು ವಿನಂತಿಸಿದ್ದರು. ಆದರೆ, ಈಗ ಕೇವಲ ಅಕೇಶಿಯಾ ಗಿಡಗಳನ್ನು ನಾಟಿ ಮಾಡುತ್ತಿರುವುದು ಆತಂಕ ಮೂಡಿಸಿದೆ. ಅಕೇಶಿಯಾ ನೆಡುತೋಪಿನಿಂದಾಗಿ, ಸುತ್ತಮುತ್ತಲಿನ ಹಳ್ಳಿಗಳಾದ ನೇರ್ಲವಳ್ಳಿ, ಸಪ್ಪುರ್ತಿ,ಮರ್ಲಮನೆ,ಸಾಯಿಮನೆ, ದೇವಿಕೈ, ಗೌಡನಮನೆ ಇನ್ನಿತರ ಹಳ್ಳಿಗಳ ಕೃಷಿಗೆ ಭವಿಷ್ಯದಲ್ಲಿ ತೊಂದರೆಯಾಗಬಹುದು’ ಎಂದರು.

ADVERTISEMENT

‘ನೈಸರ್ಗಿಕ ಅರಣ್ಯದಲ್ಲಿ ಅಕೇಶಿಯಾ ನಾಟಿ ಮಾಡುವುದಿಲ್ಲ. ಸ್ಥಳೀಯ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಎಸ್.ಜಿ.ಹೆಗಡೆ ಭರವಸೆ ನೀಡಿದರು. ಸ್ಥಳೀಯರಾದ ಜಿ.ಜಿ.ಹೆಗಡೆ, ರಾಘವೇಂದ್ರ ಹೆಗಡೆ, ಎಂ.ಎನ್.ಹೆಗಡೆ, ಮಂಜುನಾಥ ಸಾಯಿಮನೆ, ಉಮೇಶ ಹೆಗಡೆ ನೇರ್ಲವಳ್ಳಿ, ಎಂ.ಎನ್. ಹೆಗಡೆ, ಮಂಜುನಾಥ ಹೆಗಡೆ ಸಪ್ಪುರ್ತಿ, ಭಾರ್ಗವ ಹೆಗಡೆ, ರಾಮನಾಥ ನೆಗಡೆ, ಮಂಜುಳಾ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.