ADVERTISEMENT

Organic Farming | ಕುಮಟಾ: ತಣ್ಣೀರಕುಳಿಯಲ್ಲಿ ತರಕಾರಿ ಸುಗ್ಗಿ

ಜಮೀನು ಗೇಣಿಗೆ ಪಡೆದು ಕೃಷಿ: ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ಬಳ್ಳಿ

ಎಂ.ಜಿ.ನಾಯ್ಕ
Published 25 ಆಗಸ್ಟ್ 2025, 6:06 IST
Last Updated 25 ಆಗಸ್ಟ್ 2025, 6:06 IST
ಕುಮಟಾ ತಾಲ್ಲೂಕಿನ ಹೆಗಡೆ ಸಮೀಪದ ತಣ್ಣೀರುಕುಳಿ ಗ್ರಾಮದಲ್ಲಿ ಹಾಲಕ್ಕಿ ಒಕ್ಕಲು ರೈತ ಬೀರ ಗೌಡ ಸಾವಯವ ರೀತಿಯಲ್ಲಿ ಬೆಳೆದ ಪಡವಲಕಾಯಿ
ಕುಮಟಾ ತಾಲ್ಲೂಕಿನ ಹೆಗಡೆ ಸಮೀಪದ ತಣ್ಣೀರುಕುಳಿ ಗ್ರಾಮದಲ್ಲಿ ಹಾಲಕ್ಕಿ ಒಕ್ಕಲು ರೈತ ಬೀರ ಗೌಡ ಸಾವಯವ ರೀತಿಯಲ್ಲಿ ಬೆಳೆದ ಪಡವಲಕಾಯಿ   

ಕುಮಟಾ: ಆಧುನೀಕತೆಯ ಭರಾಟೆಯ ನಡುವೆ ಕೃಷಿ ಕ್ಷೇತ್ರದಿಂದ ವಿಮುಖವಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಆತಂಕದ ಸಂದರ್ಭದಲ್ಲಿ, ತಾಲ್ಲೂಕಿನ ತಣ್ಣೀರಕುಳಿ ಗ್ರಾಮದಲ್ಲಿ ಸ್ವಂತ ಜಮೀನಿಲ್ಲದಿದ್ದರೂ ಗೇಣಿ ಜಮೀನು ಬಳಸಿ ಕೃಷಿ ಮಾಡುವ ಗ್ರಾಮಸ್ಥರ ಚಟುವಟಿಕೆ ನೆಮ್ಮದಿ ಮೂಡಿಸುತ್ತಿದೆ.

ನೂರಾರು ಎಕರೆ ಕೃಷಿ ಭೂಮಿ ಬೇಸಾಯ ಚಟುವಟಿಕೆ ಇಲ್ಲದೆ ಪಾಳುಬೀಳುತ್ತಿರುವುದು ಹಲವೆಡೆ ಕಾಣಸಿಗುತ್ತಿದ್ದರೆ, ಹೆಗಡೆ ಸಮೀಪದ ತಣ್ಣೀರುಕುಳಿ ಗ್ರಾಮದಲ್ಲಿ ಮಾತ್ರ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ನಳನಳಿಸುವ ತರಕಾರಿ ಸಸಿಗಳು, ಬಳ್ಳಿಗಳೇ ಕಾಣಿಸುತ್ತಿವೆ.

ಈ ಗ್ರಾಮದಲ್ಲಿನ ಹಾಲಕ್ಕಿ ಒಕ್ಕಲು ಸಮುದಾಯದ ರೈತರು ಇದ್ದ ಅಲ್ಪ ಜಮೀನಿನಲ್ಲಿ ಭತ್ತದ ಕೃಷಿ ಮಾಡುವ ಜೊತೆಗೆ, ಅಕ್ಕಪಕ್ಕದವರ ಜಮೀನು ಗೇಣಿಗೆ ಪಡೆದು ಅಲ್ಲಿ ಬಗೆಬಗೆಯ ತರಕಾರಿ ಬೆಳೆಯುತ್ತಿದ್ದಾರೆ.

ADVERTISEMENT

ತರಕಾರಿ ಕೃಷಿಗೆ ಹೆಸರಾದ ತಣ್ಣೀರುಕುಳಿ ಗ್ರಾಮದಲ್ಲಿ ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಕೃಷಿ ಪದ್ಧತಿ ಇಂದಿಗೂ ಜೀವಂತವಿದೆ. ಮಳೆಗಾಲದಲ್ಲಿ ಭತ್ತ ನಾಟಿ ಕಾರ್ಯ ಮುಗಿದ ನಂತರ ಹಾಲಕ್ಕಿ ಸಮುದಾಯದ ಕೃಷಿಕರು ತರಕಾರಿ ಬೆಳೆಸುವ ಕೆಲಸದಲ್ಲಿ ನಿರತರಾಗುತ್ತಾರೆ.

‘ಊರಿನಲ್ಲಿ ಖಾಲಿ ಜಮೀನು ಕಂಡರೆ ಆ ಜಾಗದ ಮಾಲೀಕರಲ್ಲಿ ಗೇಣಿಗೆ ಜಾಗ ನೀಡುವಂತೆ ಮನವಿ ಮಾಡುತ್ತೇವೆ. ಬಾಡಿಗೆ ಆಧಾರದಲ್ಲಿ ತರಕಾರಿ ಬೆಳೆಯುತ್ತೇವೆ. ಗ್ರಾಮದ ಸುಮಾರು ನೂರು ಕುಟುಂಬಗಳು ಹೀಗೆ ಬಾಡಿಗೆ ಆಧಾರದ ಮೇಲೆ ಬೇರೆಯವರ ಜಾಗದಲ್ಲಿ ಮಳೆಗಾಲದ ತರಕಾರಿ ಬೆಳೆಯುವ ಮೂಲಕ ತಮ್ಮ ಕೃಷಿ ಪ್ರೀತಿ ಉಳಿಸಿಕೊಂಡಿದ್ದೇವೆ’‌ ಎನ್ನುತ್ತಾರೆ ಗ್ರಾಮಸ್ಥ ಬೀರ ಗೌಡ.

‘ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುವುದರಿಂದ ತರಕಾರಿಗಳಿಗೆ ಬೇಡಿಕೆ ಹೆಚ್ಚುತ್ತದೆ. ಈ ಸಂದರ್ಭದಲ್ಲಿ ಗ್ರಾಹಕರು ಸ್ಥಳೀಯ ತರಕಾರಿ ನಿರೀಕ್ಷಿಸುತ್ತಾರೆ. ಆದ್ದರಿಂದ ಅಂಥ ಸಂದರ್ಭದಲ್ಲಿಯೇ ಬೆಳೆ ಕೈಗೆ ಸಿಗುವಂತೆ ಕೃಷಿ ನಡೆಸಿದರೆ ಉತ್ತಮ ಬೆಲೆಗೆ ತರಕಾರಿ ಮಾರಾಟವಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.

‘ಮಳೆ ಸಮ ಪ್ರಮಾಣದಲ್ಲಿ ಬಿದ್ದರೆ ಮಾತ್ರ ಹೆಚ್ಚು ದಿನಗಳವರೆಗೆ ಉತ್ತಮ ಇಳುವರಿ ಇರುತ್ತದೆ. ನಿತ್ಯ ತರಕಾರಿ ಕೊಯ್ಲು ಮಾಡುವ ಮಹಿಳೆಯರು ಮಿನಿ ಲಾರಿಗಳಲ್ಲಿ ಅವುಗಳನ್ನು ಪೇಟೆಗೆ ಒಯ್ದು ಮಾರುತ್ತಾರೆ. ಗಂಡಸರು ತರಕಾರಿ ಬೆಳೆ ರಕ್ಷಿಸುವ ಕೆಲಸಕ್ಕೆ ನಿಲ್ಲುತ್ತಾರೆ’ ಎಂದೂ ತಿಳಿಸಿದರು.

ಬೆಳೆ ಕೈಗೆ ಬಂದ ಮೇಲೆ ಅದನ್ನು ಹಗಲು ಹೊತ್ತು ಗಿಳಿ ಅಳಿಲು ಮಂಗ ಹಾಗೂ ರಾತ್ರಿ ಕಳ್ಳರು ನರಿ ಕಾಡು ಹಂದಿಗಳಿಂದ ರಕ್ಷಿಸಿಕೊಳ್ಳುವುದು ಸವಾಲಾಗಿದೆ
ಬೀರ ಗೌಡ ತಣ್ಣೀರಕುಳಿ ಗ್ರಾಮಸ್ಥ

ಅಪ್ಪಟ ಸಾವಯವ ಪದ್ಧತಿ ‘ತಣ್ಣೀರಕುಳಿ ಗ್ರಾಮದಲ್ಲಿ ಬೆಳೆಯುವ ತರಕಾರಿಗಳಿಗೆ ರಾಸಾಯನಿಕಗಳ ಸ್ಪರ್ಶ ಇರದು. ಅಪ್ಪಟ ಸಾವಯವ ಪದ್ಧತಿಯಿಂದ ಅಲ್ಲಿನ ರೈತರು ಬೆಳೆದು ತರುವ ಹೀರೆಕಾಯಿ ಬೆಂಡೆ ಹಾಗಲ ಪಡವಲ ಸೌತೆ ಮೊಗೆ ಹಾಲುಸೋರೆ ಸಿಂಹಿಗುಂಬಳಕಾಯಿಗೆ ರುಚಿ ಹೆಚ್ಚು’ ಎನ್ನುತ್ತಾರೆ ಕುಮಟಾ ‍ಪಟ್ಟಣದಲ್ಲಿನ ಗ್ರಾಹಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.