
ಹಳಿಯಾಳ: ಭತ್ತ ಕಟಾವು ಕಾರ್ಯ ತಾಲ್ಲೂಕಿನಲ್ಲಿ ಆರಂಭಗೊಂಡಿದ್ದು, ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ದರ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಕಾರಣದಿಂದ ಭತ್ತ ಖರೀದಿ ಕೇಂದ್ರ ಬಿಟ್ಟು ಗಿರಣಿಗಳಿಗೆ ಭತ್ತ ಮಾರುವತ್ತ ರೈತರು ಆಸಕ್ತಿ ತೋರಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 6,200 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಅಂದಾಜು 2 ಲಕ್ಷ ಕ್ವಿಂಟಲ್ ಭತ್ತದ ಇಳುವರಿ ನಿರೀಕ್ಷೆ ಇದೆ. ಪ್ರಮೋದ ಭತ್ತ, ಸಾಲಿ ದೊಡಗ್ಯಾ, ಜಯಾ ದೊಡಗ್ಯಾ, ಕರಿಭತ್ತ ಬೆಳೆಸುವ ಜೊತೆಗೆ ಜಯಾ, ಅಭಿಲಾಷ, ಇಂಟಾನ್, ಬಿಪಿಟಿ, ಐಆರ್ 64, ಆರ್‌ಎನ್ಆರ್, ಎಂಟಿಯು1001, ಎಂ.ಟಿ.ಯು1010 ನಂತಹ ಸುಧಾರಿತ ತಳಿಯ ಭತ್ತ ಬೆಳೆಸಲಾಗಿದೆ.
ಹಳಿಯಾಳ ಮಾರುಕಟ್ಟೆಯಲ್ಲಿ ಭತ್ತ ಖರೀದಿದಾರರು ಸರಾಸರಿ ಪ್ರತಿ ಕ್ವಿಂಟಲ್ ಭತ್ತಕ್ಕೆ ₹2,400 ನೀಡುತ್ತಿದ್ದು, ಎರಡು ದಿನಗಳ ಹಿಂದೆ ಗರಿಷ್ಠ ₹2,600ವರೆಗೆ ದರ ನಿಗದಿಯಾಗಿದೆ. ಈ ದರದಲ್ಲಿ ಹಲವು ರೈತರು ಭತ್ತ ಮಾರಾಟ ಮಾಡಿದ್ದಾರೆ.
‘ಕಳೆದ ವರ್ಷ ಮಾರುಕಟ್ಟೆಯ ದರ ಕನಿಷ್ಠ ₹2,200ರಿಂದ ಗರಿಷ್ಠ ₹2,400 ಇತ್ತು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ 2.40 ಲಕ್ಷ ಕ್ವಿಂಟಲ್ ಭತ್ತ ಮಾರಾಟವಾಗಿತ್ತು. ಉತ್ತಮ ಗುಣಮಟ್ಟದ ಭತ್ತವು ₹2,700ರವರೆಗೂ ದರ ಪಡೆದಿತ್ತು. ಭತ್ತದ ವಹಿವಾಟಿನಿಂದ ಎಪಿಎಂಸಿಗೆ ₹28.90 ಲಕ್ಷ ಆದಾಯ ಸಂಗ್ರಹವಾಗಿತ್ತು’ ಎಂದು ಎಪಿಎಂಸಿ ಎಸ್.ಎಸ್. ಹಾವಣ್ಣವರ ಮಾಹಿತಿ ನೀಡಿದರು.
‘ಸರ್ಕಾರ ಪ್ರಸಕ್ತ ಸಾಲಿನಲ್ಲಿ ಭತ್ತ ಖರೀದಿ ಕೇಂದ್ರಗಳ ಮೂಲಕ ಖರೀದಿಗೆ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಹೆಚ್ಚು ದರ ಸಿಗುತ್ತಿದೆ. ಹೀಗಾಗಿ ಅಲ್ಲಿಯೇ ಮಾರಾಟ ಮಾಡಲು ಬಹುತೇಕ ರೈತರು ಒಲವು ತೋರಿಸುತ್ತಿದ್ದಾರೆ. ಉತ್ತಮ ದರ ಸಿಗುವ ನಿರೀಕ್ಷೆಯಲ್ಲಿ ಭತ್ತದ ಕೊಯ್ಲು ಆರಂಭಿಸಿದ್ದೇವೆ’ ಎಂದು ರೈತರಾದ ಲಕ್ಷ್ಮಣ ಲಾಡ, ಮಹಾದೇವ ಲಾಡ ಹೇಳಿದರು.
ಭತ್ತ ಕಟ್ಟಾವು ಮಾಡಿ ಬಣವೆ ಹಾಕುವಾಗ ಹುಲ್ಲು ಚೆನ್ನಾಗಿ ಒಣಗಿಸಿ ಬಣವೆ ಹಾಕಬೇಕು. ಆಗ ಮಾತ್ರ ಭತ್ತ ಚೆನ್ನಾಗಿ ಉಳಿದು ದರವು ಚೆನ್ನಾಗಿ ಬರುತ್ತದೆಪಿ.ಐ. ಮಾನೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.