ADVERTISEMENT

ಭತ್ತದ ಒಣಹುಲ್ಲಿನ ವ್ಯಾಪಾರ ಜೋರು: ಗದ್ದೆಗಳಲ್ಲಿ ಆಕರ್ಷಿಸುತ್ತಿರುವ ಮೇವಿನ ರೋಲ್‌

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 4:03 IST
Last Updated 14 ನವೆಂಬರ್ 2025, 4:03 IST
ಮುಂಡಗೋಡ ತಾಲ್ಲೂಕಿನ ಚವಡಳ್ಳಿ ರಸ್ತೆಯಲ್ಲಿರುವ ಭತ್ತದ ಗದ್ದೆಯೊಂದರಲ್ಲಿ ಒಣಮೇವಿನ ಸುರುಳಿ ಮಾಡಿ ಸಂಗ್ರಹಿಸಿರುವುದು
ಮುಂಡಗೋಡ ತಾಲ್ಲೂಕಿನ ಚವಡಳ್ಳಿ ರಸ್ತೆಯಲ್ಲಿರುವ ಭತ್ತದ ಗದ್ದೆಯೊಂದರಲ್ಲಿ ಒಣಮೇವಿನ ಸುರುಳಿ ಮಾಡಿ ಸಂಗ್ರಹಿಸಿರುವುದು   

ಮುಂಡಗೋಡ: ಭತ್ತದ ಗದ್ದೆಗಳಲ್ಲಿ ಸುರುಳಿ (ರೋಲ್‌) ಮಾಡಿದ ಒಣಹುಲ್ಲಿನ ಸಂಗ್ರಹ ಹೆಚ್ಚಾಗಿ ಕಾಣುತ್ತಿದೆ. ಒಣಹುಲ್ಲಿನ ದರ ಕಳೆದ ವರ್ಷಕ್ಕಿಂತ ತುಸು ಕಡಿಮೆಯಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ಯಂತ್ರಗಳಿಂದ ಭತ್ತ ಕೊಯ್ಲು ಮಾಡಿಸಿದಾಗ, ಕಾಳಿನಿಂದ ಬೇರ್ಪಟ್ಟ ಒಣಹುಲ್ಲನ್ನು ಸುರುಳಿ ಆಕಾರದಲ್ಲಿ ಸುತ್ತುತ್ತ, ದೊಡ್ಡ ದೊಡ್ಡ ಬಂಡಲ್‌ಗಳನ್ನಾಗಿ ಮಾಡಿ ಮಾರಲಾಗುತ್ತಿದೆ.

ಅರೆಮಲೆನಾಡಿನ ತಾಲ್ಲೂಕಿನಲ್ಲಿ ಭತ್ತ ಕೊಯ್ಲು, ಒಣಹುಲ್ಲು ಸಂಗ್ರಹದಲ್ಲಿಯೂ ಈಚೆಗಿನ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ಹಿಂದೆ, ಭತ್ತ ಕಟಾವಿಗೆ ಬಂದ ಸಮಯದಲ್ಲಿ ಕುಡಗೋಲಿನಿಂದ ಕೂಲಿಆಳುಗಳು ಭತ್ತ ಕಟಾವು ಮಾಡುತ್ತ, ಕಾಳು ಸಹಿತ ಒಣಹುಲ್ಲಿನ ಬಂಡಲ್‌ ಗದ್ದೆಯಲ್ಲಿ ಇಡುತ್ತ ಮುಂದೆ ಸಾಗುತ್ತಿದ್ದರು. ನಂತರ, ಬಣವೆ ಹಾಕಿ, ಭತ್ತದ ಕಾಳು ರಾಶಿ ಮಾಡುವ ಪದ್ಧತಿಯಿತ್ತು. ಆದರೆ, ಕಳೆದ ಒಂದು ದಶಕದಿಂದ ಈಚೆಗೆ ತಾಲ್ಲೂಕಿನ ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಬದಲಾವಣೆ ಆಗಿದೆ. ಕೃಷಿಯಲ್ಲಿ ಯಂತ್ರಗಳ ಅಳವಡಿಕೆ ಹೆಚ್ಚಾದಂತೆ ಹಾಗೂ ಕೂಲಿಆಳುಗಳ ಕೊರತೆ ಕಾಡುತ್ತಿರುವಾಗ, ಹಿಂದಿನ ಕೃಷಿ ಪದ್ಧತಿಯೂ ಮರೆಯಾಗಿದೆ. ಬದಲಾದ ಕಾಲದಲ್ಲಿ ಸುಗ್ಗಿಯ ಸಂಭ್ರಮವೂ ಇಲ್ಲ. ತೆನೆಸಹಿತ ಭತ್ತವನ್ನು ರಾಶಿ ಮಾಡಿ, ಚೀಲಕ್ಕೆ ತುಂಬುವಷ್ಟು ಸಮಯವೂ ಇಲ್ಲದಂತಾಗಿದೆ ಎಂದು ಹಿರಿಯ ರೈತರು ಹೇಳುತ್ತಾರೆ.

‘ತಾಲ್ಲೂಕಿನ ಭತ್ತದ ಗದ್ದೆಗಳಿಂದ ಸಂಗ್ರಹವಾಗುವ ಒಣಹುಲ್ಲನ್ನು ಪಕ್ಕದ ಶಿರಸಿ, ಯಲ್ಲಾಪುರ, ಬಂಕಾಪುರ, ಹಾವೇರಿ ತಾಲ್ಲೂಕಿನ ರೈತರು ಖರೀದಿಸುತ್ತಾರೆ. ಭತ್ತ ಕೊಯ್ಲು ಆರಂಭಗೊಂಡಿರುವುದರಿಂದ, ಅದರ ಬೆನ್ನಲ್ಲೇ ಒಣಹುಲ್ಲಿನ ಮಾರಾಟವೂ ಜೋರಾಗಿದೆ. ಆದರೆ, ಒಂದೊಂದು ಭಾಗದಲ್ಲಿ ಒಂದು ದರವಿದ್ದು, ಪ್ರತಿ ಬಂಡಲ್‌ಗೆ ಸಾಮಾನ್ಯವಾಗಿ ₹90ರಿಂದ ₹120ರವರೆಗೆ ಸದ್ಯ ಮಾರಾಟವಾಗುತ್ತಿದೆ. ಶುಂಠಿ ಹಾಕುವ ಸಮಯದಲ್ಲಿ ಭತ್ತದ ಒಣಹುಲ್ಲಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಸದ್ಯ ಕಟಾವು ಕಾರ್ಯ ಎಲ್ಲೆಡೆ ಆರಂಭವಾಗಿರುವುದರಿಂದ, ದರದಲ್ಲಿ ತುಸು ಕಡಿಮೆಯಿದೆ. ಶುಂಠಿ ಹಾಕುವವರು, ಜಾನುವಾರು ಸಾಕಣೆ ಮಾಡಿದವರು ಇಲ್ಲಿನ ಒಣಹುಲ್ಲನ್ನು ಖರೀದಿಸಿ, ಸಂಗ್ರಹಿಸಿ ಇಡುತ್ತಾರೆʼ ಎಂದು ರೈತ ಕೋಟೇಶ ಗಣಪ್ಪನವರ ಹೇಳಿದರು.

ADVERTISEMENT

‘ಕಳೆದ ವರ್ಷ ಒಂದು ಬಂಡಲ್‌ ಒಣ ಹುಲ್ಲಿಗೆ ₹ 130ರಿಂದ ₹160ರವರೆಗೆ ದರ ಸಿಕ್ಕಿತ್ತು. ಈ ವರ್ಷ ಆರಂಭದಲ್ಲಿಯೇ ದರ ಕುಸಿದಿದೆ. ಮುಂದಿನ ದಿನಗಳಲ್ಲಿ ದರ ಏರಬಹುದು. ಯಂತ್ರದ ಮೂಲಕ ಒಂದು ಬಂಡಲ್‌ ಒಣಹುಲ್ಲಿನ ಸುರಳಿ ಮಾಡಿಸಲು ₹27ರಿಂದ ₹35ರವರೆಗೆ ಖರ್ಚು ತಗಲುತ್ತದೆ. ರೈತ ಬೆಳೆದ ಬೆಳೆ, ಮೇವಿಗೆ ದರ ಕೈ ಹಿಡಿಯುತ್ತಿಲ್ಲ. ಹಿಂದಿನ ದಿನಗಳಲ್ಲಿ ಭತ್ತ ರಾಶಿ ಮಾಡಿದ ನಂತರವಷ್ಟೇ ಮೇವು ಸಿಗುತ್ತಿತ್ತು. ಆದರೆ, ಈಗ ಸುಧಾರಿತ ಕೃಷಿ ಪದ್ಧತಿಯಿಂದ, ಒಂದು ಕಡೆ ಕಾಳು, ಮತ್ತೊಂದು ಕಡೆ ಮೇವು ಸಂಗ್ರಹವಾಗುವಂಥ ವ್ಯವಸ್ಥೆಯಲ್ಲಿ ನಾವಿದ್ದೇವೆʼ ಎಂದು ರೈತ ಶಂಕರ ಕಲಕೇರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.