ADVERTISEMENT

'ಫೋನ್ ಮೂಲಕ ಪಿಂಚಣಿ' ಯೋಜನೆಗೆ ಶೀಘ್ರ ಚಾಲನೆ: ಕಂದಾಯ ಸಚಿವ ಆರ್.ಅಶೋಕ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 10:41 IST
Last Updated 15 ಏಪ್ರಿಲ್ 2022, 10:41 IST

ಅಚವೆ (ಕಾರವಾರ): 'ಫೋನ್ ಮೂಲಕ ಪಿಂಚಣಿಯನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯಕ್ರಮವನ್ನು 10 ದಿನಗಳಲ್ಲಿ ಉದ್ಘಾಟಿಸಲಾಗುವುದು' ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಅಂಕೋಲಾ ತಾಲ್ಲೂಕಿನ ಅಚವೆ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ 'ಕಂದಾಯ ಸಚಿವರ ಗ್ರಾಮ ವಾಸ್ತವ್ಯ' ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

'ಫೋನ್ ಕರೆ ಮಾಡಿದವರ ಮನೆಗೆ ಕಂದಾಯ ಸಿಬ್ಬಂದಿ ತೆರಳಿ, ಅಲ್ಲೇ ಮಹಜರು ಮಾಡಿ ಪ್ರಮಾಣೀಕರಿಸಿ ಪ್ರಮಾಣಪತ್ರ ನೀಡಲಿದ್ದಾರೆ. ಬಳಿಕ ಅವರಿಗೆ ಪಿಂಚಣಿ ವಿತರಣೆ ಮಾಡಲಾಗುವುದು. ಜನರಿದ್ದಲ್ಲೇ ಸರ್ಕಾರ, ಜನರದ್ದೇ ಸರ್ಕಾರ ಎಂಬ ಪರಿಕಲ್ಪನೆಯಲ್ಲಿ ಕೆಲಸ ಮಾಡಲಾಗುತ್ತಿದೆ' ಎಂದರು.

ADVERTISEMENT

'ಕೆಲವು ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯದ ಸಂದರ್ಭ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿದ ದೂರುಗಳಿವೆ. ಈ ಬಗ್ಗೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಹಾಗೆ ಮಾಡದಂತೆ ಸೂಚಿಸಲಾಗಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳಲು ಅವರು ಸರ್ಕಾರಿ ಶಾಲೆ, ಸರ್ಕಾರಿ ವಸತಿ ನಿಲಯಗಳಲ್ಲೇ ವಾಸ್ತವ್ಯ ಮಾಡುವಂತೆ ಸೂಚಿಸಲಾಗಿದೆ' ಎಂದರು.

'ಅಚವೆಯಲ್ಲಿ ನನ್ನ ನಾಲ್ಕನೇ ಗ್ರಾಮ ವಾಸ್ತವ್ಯ. ನಾನು ವಾಸ್ತವ್ಯ ಹೂಡಿದ ಗ್ರಾಮಗಳ ಅಭಿವೃದ್ಧಿಗೆ ಇಲಾಖೆಯಿಂದ ₹ 1 ಕೋಟಿ ವಿಶೇಷ ಅನುದಾನ ನೀಡಲಾಗುವುದು. ಆ ಊರಿನ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗಲಿದೆ' ಎಂದು ತಿಳಿಸಿದರು.

'ಹಿಂದಿನ ಮೂರು ಗ್ರಾಮ ವಾಸ್ತವ್ಯಗಳಲ್ಲಿ 90 ಸಾವಿರ ಅರ್ಜಿಗಳು ಬಂದಿವೆ. ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ. ಅಧಿಕಾರಿಗಳೇ ಗ್ರಾಮಕ್ಕೆ ಹೋಗುವುದರಿಂದ ಜನರ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.