ಕಾರವಾರ: ವೃದ್ಧರಿಗೆ, ವಿಧವೆಯವರಿಗೆ ಸೇರಿದಂತೆ ಸಂಕಷ್ಟದಲ್ಲಿರುವವರ ಜೀವನ ನಿರ್ವಹಣೆಗೆ ಸಾಮಾಜಿಕ ಭದ್ರತಾ ಯೋಜನೆ ಮೂಲಕ ನೀಡಲಾಗುವ ಪಿಂಚಣಿಗಳ ದುರ್ಬಳಕೆ ತಡೆಯಲು ಕೇಂದ್ರ ಸರ್ಕಾರ ‘ಸತ್ಯಾನ್ವೇಷಣೆ’ ಆರಂಭಿಸಿದೆ. ಪಿಂಚಣಿದಾರರ ದೃಢೀಕರಣದ ಮೂಲಕ ಅವರ ಅಸ್ತಿತ್ವ ದೃಢೀಕರಿಸಲಾಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಉತ್ತರ ಕನ್ನಡ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ.
ಸಾಮಾಜಿಕ ಭದ್ರತೆ ಯೋಜನೆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಫಲಾನುಭವಿಗಳ ಖಾತೆಗೆ ಮಾಸಿಕ ಪಿಂಚಣಿ ಪಾವತಿಸುತ್ತಿವೆ. ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಆಧಾರದ ಮೇಲೆ ಮಾಸಿಕ ಕನಿಷ್ಠ ₹200 ರಿಂದ ₹500ರ ವರೆಗೆ ಫಲಾನುಭವಿಗೆ ತನ್ನ ಪಾಲು ನೀಡುತ್ತಿದೆ. ರಾಜ್ಯದ ಪಾಲೂ ಸೇರಿ ವೃದ್ಧರು, ಅಂಗವಿಕಲರು ಹಾಗೂ ವಿಧವೆಯರಿಗೆ ಕನಿಷ್ಠ ₹600 ರಿಂದ ₹2,000ರ ವರೆಗೆ ಮಾಸಾಶನ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತಿದೆ.
‘ಸಾಮಾಜಿಕ ಭದ್ರತೆ ಯೋಜನೆಯ ಫಲಾನುಭವಿಗಳು ಇರದಿದ್ದರೂ ಹಣ ಪಾವತಿಯಾಗುತ್ತಿರುವ ದೂರು ಕೆಲವೆಡೆ ಹೆಚ್ಚಿದ್ದವು. ಯೋಜನೆಗೆ ಒಳಪಡದವರನ್ನೂ ಫಲಾನುಭವಿಯಾಗಿಸಿರುವ ಶಂಕೆಯ ಹಿನ್ನೆಲೆಯಲ್ಲಿಯೂ ಕೇಂದ್ರ ಸರ್ಕಾರ ‘ಸತ್ಯಾಪನ್’ ಮೊಬೈಲ್ ಆ್ಯಪ್ ಮೂಲಕ ದೃಢೀಕರಿಸಲು ಮುಂದಾಗಿದೆ. ಈ ಆ್ಯಪ್ ಮೂಲಕ ಗ್ರಾಮ ಆಡಳಿತಾಧಿಕಾರಿಗಳು ಫಲಾನುಭವಿಗಳ ದೃಢೀಕರಣ ಪ್ರಕ್ರಿಯೆ ನಡೆಸುತ್ತಿದ್ದಾರೆ’ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಯ ಸಹಾಯಕ ನಿರ್ದೇಶಕ ಎಸ್.ಎಚ್.ಪ್ರಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಫಲಾನುಭವಿಗಳ ಮನೆ ಮನೆಗೆ ತೆರಳಿ ಗ್ರಾಮ ಆಡಳಿತಾಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ. ಜೊತೆಗೆ ಅವರ ಭಾವಚಿತ್ರ ತೆಗೆದು ಆ್ಯಪ್ ಮೂಲಕ ಅಪ್ಲೋಡ್ ಮಾಡಿ ಫಲಾನುಭವಿಗಳ ಮಾಹಿತಿ ದೃಢೀಕರಿಸುತ್ತಿದ್ದಾರೆ. ಗುಡ್ಡಗಾಡು ಜಿಲ್ಲೆಯಾದರೂ, ನೆಟ್‌ವರ್ಕ್ ಸಮಸ್ಯೆಗಳಿದ್ದರೂ ಜಿಲ್ಲೆಯಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲೇ ಶೇ 66ರಷ್ಟು ಫಲಾನುಭವಿಗಳ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ದೃಢೀಕರಿಣ ಪ್ರಕ್ರಿಯೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದ್ದೇವೆ’ ಎಂದು ವಿವರಿಸಿದರು.
ದೃಢೀಕರಣ ಪ್ರಕ್ರಿಯೆಗೆ ಒಳಪಡದ ಫಲಾನುಭವಿಗಳು ಆಯಾ ಭಾಗದ ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ ದಾಖಲೆ ಸಲ್ಲಿಸಿ ದೃಢೀಕರಣ ಪ್ರಕ್ರಿಯೆಗೆ ಒಳಪಡಬಹುದುಎಸ್.ಎಚ್.ಪ್ರಶಾಂತ್ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳ ಸಹಾಯಕ ನಿರ್ದೇಶಕ
28 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು
ವೃದ್ಧಾಪ್ಯ ವೇತನ ವಿಧವಾ ವೇತನ ಅಂಗವಿಕಲ ವೇತನಗಳನ್ನು ಕೇಂದ್ರ ಸರ್ಕಾರದ ಪಾಲಿನೊಂದಿಗೆ ರಾಜ್ಯ ಸರ್ಕಾರ ನೀಡುತ್ತಿದೆ. ಜಿಲ್ಲೆಯಲ್ಲಿ 28884 ಫಲಾನುಭವಿಗಳಿದ್ದಾರೆ. ಈವರೆಗೆ 18779 ಫಲಾನುಭವಿಗಳ (ಶೇ 65.02) ದಾಖಲೆಗಳನ್ನು ‘ಸತ್ಯಾಪನ್’ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. 10 ಸಾವಿರದಷ್ಟು ಫಲಾನುಭವಿಗಳ ದಾಖಲೆ ಅಪ್‌ಲೋಡ್ ಬಾಕಿ ಇದೆ. ಪಿಂಚಣಿದಾರರನ್ನು ದೃಢೀಕರಿಸುವ ಪ್ರಕ್ರಿಯೆಯಲ್ಲಿ ಸಿದ್ದಾಪುರ ತಾಲ್ಲೂಕು (ಶೇ 68.88) ಮೊದಲ ಸ್ಥಾನದಲ್ಲಿದೆ. ಕಾರವಾರ (ಶೇ 67.31) ಯಲ್ಲಾಪುರ (ಶೇ 66.67) ನಂತರದ ಸ್ಥಾನದಲ್ಲಿವೆ. ಮುಂಡಗೋಡದಲ್ಲಿ (ಶೇ 35.43) ಕಡಿಮೆ ಸಾಧನೆಯಾಗಿದೆ ಎಂಬುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.