ADVERTISEMENT

ಮಲ್ಲಾಪುರದಲ್ಲಿ ಜನಾಂದೋಲನ ನ.17ಕ್ಕೆ

ಕೈಗಾ ಅಣುವಿದ್ಯುತ್ ಸ್ಥಾವರ ವಿಸ್ತರಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 15:39 IST
Last Updated 1 ನವೆಂಬರ್ 2019, 15:39 IST
ಯಲ್ಲಾಪುರದಲ್ಲಿ ಗುರುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಸ್ವರ್ಣವಲ್ಲಿ ಶ್ರೀಗಳು ಮಾತನಾಡಿದರು.
ಯಲ್ಲಾಪುರದಲ್ಲಿ ಗುರುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಸ್ವರ್ಣವಲ್ಲಿ ಶ್ರೀಗಳು ಮಾತನಾಡಿದರು.   

ಯಲ್ಲಾಪುರ: ಕೈಗಾ ಅಣುಸ್ಥಾವರದಲ್ಲಿ 5 ಮತ್ತು 6ನೇ ಘಟಕ ವಿಸ್ತರಣೆಗೆ ಕೇಂದ್ರ ಪರಿಸರ ಇಲಾಖೆ ನೀಡಿರುವ ಅನುಮತಿ ವಿರೋಧ ವ್ಯಕ್ತಪಡಿಸುವ ಮತ್ತು ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಮಲ್ಲಾಪುರದಲ್ಲಿ ನ.17ರಂದು ಬೃಹತ್ ಜನಾಂದೋಲನ ಆಯೋಜಿಸಲಾಗಿದೆ ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಗುರುವಾರ ಇಲ್ಲಿ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಮಠಾಧೀಶರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ. ಬೃಹತ್ ಸಂಖ್ಯೆಯಲ್ಲಿ ಜನರು ಸೇರಿದರೆ ಸರ್ಕಾರದ ಗಮನ ಸೆಳೆಯಲು ಅನುಕೂಲವಾಗುತ್ತದೆ ಎಂದರು.

ಅಣುಸ್ಥಾವರದ ದುಷ್ಟರಿಣಾಮ ಜನರ ಅರಿವಿಗೆ ಬರುತ್ತಿದೆ. ಕ್ಯಾನ್ಸರ್‌ನಂತಹ ಭಯಾನಕ ರೋಗಗಳು ಹೆಚ್ಚುತ್ತಿವೆ. ಘಟಕಗಳ ವಿಸ್ತರಣೆ ಹೆಚ್ಚಾದಂತೆ ಅಪಾಯವೂ ಹೆಚ್ಚುತ್ತದೆ. ಭವಿಷ್ಯದ ದೃಷ್ಟಿಯಿಂದ ಈ ಹೋರಾಟ ಅನಿವಾರ್ಯವಾಗಿದೆ. ಅಹವಾಲು ಸ್ವೀಕಾರ ಸಭೆಯಲ್ಲಿ ಕೇಳಿದ್ದ ಪ್ರಶ್ನೆಗೆ ಸಮರ್ಪಕ ಉತ್ತರ ದೊರೆತಿಲ್ಲ. ಕಾಟಾಚಾರಕ್ಕೆ ಸಭೆ ನಡೆದಿದೆ ಎಂದು ಆರೋಪಿಸಿದರು.

ADVERTISEMENT

ಗುರುದಾಸ ಫಾಯಿದೆ ಕಾರ್ಯಕ್ರಮದ ರೂಪರೇಷೆ ಕುರಿತು ಮಾಹಿತಿ ನೀಡಿ, ಕಾನೂನು ಹೋರಾಟವನ್ನು ಕೂಡ ನಡೆಸಲಾಗುವುದು ಎಂದರು.
ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸರ್ಕಾರ ಅಣುಸ್ಥಾವರ ಕೈಬಿಟ್ಟು, ಬದಲಿ ಯೋಜನೆಗೆ ಮುಂದಾಗಬೇಕು ಎಂದರು. ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮ ಗಾಂವ್ಕರ್ ಮಾತನಾಡಿ, ‘ಜಿಲ್ಲೆಯಲ್ಲಿ ಹತ್ತಾರು ಯೋಜನೆಗಳಿಗೆ ಜಾಗ ನೀಡಿರುವ ಪರಿಣಾಮ, ಈಗಾಗಲೇ 48ಸಾವಿರ ಹೆಕ್ಟೇರ್ ಅರಣ್ಯ, 23,000 ಎಕರೆ ಕೃಷಿ ಜಮೀನು ಕಳೆದುಕೊಂಡಾಗಿದೆ. ಕೈಗಾವೊಂದರಿಂದಲೇ 56,000 ಮಿಲಿಯನ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಜಿಲ್ಲೆಗೆ ವಿದ್ಯುತ್ ಇಲ್ಲ. ನಮ್ಮ ಹೋರಾಟಕ್ಕೆ ಶಾಸಕಾಂಗ-ನ್ಯಾಯಾಂಗವನ್ನು ಬಳಸಿಕೊಳ್ಳಬೇಕು’ ಎಂದರು. ಉಮೇಶ ಭಾಗವತ ಕಳಚೆ, ಪಿ.ಜಿ.ಭಟ್ಟ ಬರಗದ್ದೆ ಸಲಹೆ ನೀಡಿದರು.
ಟಿ.ಎಂ.ಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಸ್ವಾಗತಿಸಿದರು. ವೆಂಕಟರಮಣ ಬೆಳ್ಳಿ ನಿರೂಪಿಸಿದರು. ನರಸಿಂಹ ಕೋಣೆಮನೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.