ADVERTISEMENT

ಬಿಜೆಪಿಯಲ್ಲಿ ಗುಂಪುಗಳಿಲ್ಲ, ಕೊಟ್ಟ ಖಾತೆ ನಿಭಾಯಿಸುವುದು ಮುಖ್ಯ: ಸಚಿವ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 11:38 IST
Last Updated 26 ಜನವರಿ 2021, 11:38 IST
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ   

ಕಾರವಾರ: ‘ಖಾತೆ ಬದಲಾವಣೆಯಲ್ಲಿ ಮುಖ್ಯಮಂತ್ರಿಗೆ ಪರಮಾಧಿಕಾರವಿದೆ. ಯಾವ ಖಾತೆ ಸಿಕ್ಕಿದೆ ಎಂಬುದಕ್ಕಿಂತಲೂ ಕೊಟ್ಟ ಖಾತೆಯನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಮುಖ್ಯ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾರ್ಮಿಕವಾಗಿ ನುಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಚಿವ ಸಂಪುಟವನ್ನು ಪುನರ್ ರಚನೆ ಮಾಡಿದಾಗಲೆಲ್ಲ ಸಚಿವರ ಅಸಮಾಧಾನಗಳ ಕುರಿತಾದ ಚರ್ಚೆಗಳು ನಡೆಯುತ್ತವೆ. ಇದು ಕೇವಲ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಅಂತಲ್ಲ. ಈ ಹಿಂದೆಯೂ ಅನೇಕ ಸರ್ಕಾರಗಳಲ್ಲಿ ಆಗಿದೆ. ಈ ಬಾರಿಯೂ ಮುಖ್ಯಮಂತ್ರಿ ಎಲ್ಲವನ್ನೂ ಸರಿಪಡಿಸುವ ವಿಶ್ವಾಸವಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ನಿಂದ ಬಿ.ಜೆ.ಪಿ.ಗೆ ಬಂದ ಎಲ್ಲರೂ ಒಟ್ಟಿಗೇ ಇದ್ದೇವೆ. ಈಗ ಪಕ್ಷದಲ್ಲಿ ಯಾವುದೇ ಗುಂಪುಗಳಿಲ್ಲ. ಆನಂದ ಸಿಂಗ್ ಸೇರಿದಂತೆ ಸಂಪುಟದ ಎಲ್ಲರ ಜೊತೆಗೇ ನೂರಕ್ಕೆ ನೂರು ಒಗ್ಗಟ್ಟಾಗಿದ್ದೇವೆ. ಆಡಳಿತದ ದೃಷ್ಟಿಯಿಂದ ಪದೇಪದೇ ಖಾತೆ ಬದಲಾವಣೆ ಸರಿಯಲ್ಲ ಎಂಬುದು ಎಲ್ಲರ ಅಭಿಪ್ರಾಯವಾಗಿದೆ’ ಎಂದರು.

ADVERTISEMENT

‘ಇವತ್ತಿನ ರಾಜಕಾರಣವೇ ಹಾಗಿದೆ. ಶಾಸಕರಾಗುವ ತನಕ ಟಿಕೆಟ್ ಸಿಕ್ಕಿಲ್ಲ ಎಂದು, ಶಾಸಕರಾದ ಬಳಿಕ ಮಂತ್ರಿಸ್ಥಾನ ಸಿಕ್ಕಿಲ್ಲ ಎಂದು, ಬಳಿಕ ನಾವು ಹೇಳಿದ ಖಾತೆ ಸಿಕ್ಕಿಲ್ಲ ಎಂದು ಗಲಾಟೆಯಾಗುತ್ತದೆ. ಇದು ನಮ್ಮ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ’ ಎಂದು ಮುಗುಳ್ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.