ADVERTISEMENT

ಶಿರಸಿ: ಹಂದಿ ಹಾವಳಿ; ಜನರಿಗೆ ಕಿರಿಕಿರಿ

ಜನನಿಭಿಡ ಸ್ಥಳಗಳಲ್ಲಿ ಓಡಾಟ:ರಸ್ತೆಯ ಮೇಲೆಲ್ಲ ಕಸ ಚೆಲ್ಲಾಪಿಲ್ಲಿ

ರಾಜೇಂದ್ರ ಹೆಗಡೆ
Published 30 ಜುಲೈ 2025, 7:27 IST
Last Updated 30 ಜುಲೈ 2025, 7:27 IST
ಶಿರಸಿಯ ಜನವಸತಿ ಪ್ರದೇಶದಲ್ಲಿ ಗುಂಪು ಗುಂಪಾಗಿ ಕಾಣಿಸಿಕೊಂಡ ಹಂದಿಗಳು 
ಶಿರಸಿಯ ಜನವಸತಿ ಪ್ರದೇಶದಲ್ಲಿ ಗುಂಪು ಗುಂಪಾಗಿ ಕಾಣಿಸಿಕೊಂಡ ಹಂದಿಗಳು    

ಶಿರಸಿ: ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗ ತೊಡಗಿದೆ. ಎಲ್ಲೆಂದರಲ್ಲಿ ಕೆಸರಲ್ಲಿ ಉರುಳಾಡಿ ಜನನಿಭಿಡ ಪ್ರದೇಶದಲ್ಲಿ ಸುತ್ತುತ್ತಿರುವ ಹಂದಿಗಳ ನಿಯಂತ್ರಣಕ್ಕೆ ಕ್ರಮವಹಿಸುತ್ತಿಲ್ಲ ಎಂದು ಸಾರ್ವಜನಿಕರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ನಗರದ ಬಹುತೇಕ ಬಡಾವಣೆಗಳಲ್ಲಿ ತ್ಯಾಜ್ಯ ತುಂಬಿದ್ದು ಅಶುಚಿತ್ವದ ವಾತಾವರಣ ಹೆಚ್ಚಿದೆ. ಇಲ್ಲಿನ ಕೆಇಬಿ ರಸ್ತೆ, ಗುರುನಗರ, ಮರಾಠಿಕೊಪ್ಪ, ರಾಘವೇಂದ್ರ ವೃತ್ತ, ಜೂ ವೃತ್ತ, ಮುಸ್ಲಿಂ ಗಲ್ಲಿ, ಕೋಟೆಕೆರೆ, ಕೆರೆಗುಂಡಿ ರಸ್ತೆ ಸೇರಿದಂತೆ ಪೊಲೀಸ್‌ ಠಾಣೆ ರಸ್ತೆಗಳಲ್ಲಿ ಹಂದಿಗಳ ಹಾವಳಿ ಮಿತಿ ಮೀರಿದೆ. ಪಾದಚಾರಿಗಳು ಮತ್ತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಪ್ರತಿ ನಿತ್ಯ ಮುಂಜಾನೆಯಿಂದಲೇ ರಸ್ತೆಗಿಳಿಯುವ ಹಂದಿಗಳು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿವೆ’ ಎಂಬುದು ಜನರ ದೂರು.

ಅಲ್ಲಲ್ಲಿ ಬಿದ್ದಿರುವ ತ್ಯಾಜ್ಯವನ್ನು ಚೆಲ್ಲಾಪಿಲ್ಲಿ ಮಾಡುವುದರ ಜತೆಗೆ ಗಲೀಜು ಹೆಚ್ಚಾಗಲು ಕಾರಣವಾಗಿವೆ ಎಂಬುದಾಗಿ ಸಾರ್ವಜನಿಕರು ದೂರುತ್ತಿದ್ದಾರೆ.

ADVERTISEMENT

‘ನಗರದಲ್ಲಿ ಬೀದಿನಾಯಿಗಳ ಕಾಟ ಹೆಚ್ಚುತ್ತಿದ್ದು, ಅದರ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ದೂರಿದ್ದೆವು. ಆದರೆ ಈಗ ಅವುಗಳ ಜತೆ ಹಂದಿಗಳ ಕಾಟವೂ ಹೆಚ್ಚಾಗಿದೆ. ನಗರದ ಮುಖ್ಯರಸ್ತೆ, ಅಡ್ಡರಸ್ತೆಗಳಲ್ಲಿ ಅಲ್ಲದೇ ಸಣ್ಣಪುಟ್ಟ ಬೀದಿಗಳಲ್ಲೂ ಹಂದಿ ಹಾವಳಿ ಹೆಚ್ಚಾಗಿದ್ದು, ಓಡಾಡಲು ಭಯವಾಗುತ್ತದೆ. ಅವು ಗಲೀಜು ಮಾಡುವುದರ ಜತೆಗೆ ಮಕ್ಕಳಲ್ಲೂ ಭಯ ಹುಟ್ಟಿಸುತ್ತವೆ’ ಎಂದು ನಗರದ ನಿವಾಸಿ ನಾಗರಾಜ ನಾಯ್ಕ ಹೇಳಿದರು.

‘ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಜ್ವರ, ಶೀತದಂತಹ ಸಮಸ್ಯೆ ತಲೆದೋರುತ್ತಿದೆ. ಇದರ ಹಿನ್ನೆಲೆಯಲ್ಲಿ ನಗರಪ್ರದೇಶ ಶುಚಿಯಾಗಿಡುವುದರ ಜತೆಗೆ ಹಂದಿಗಳ ಹಾವಳಿ ತಡೆಗಟ್ಟಲು ನಗರಸಭೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ನಾಗರಿಕರು ಮನವಿ ಮಾಡಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಹಂದಿಯ ಮಾಲೀಕರಿಗೆ ನೋಟಿಸ್‌ ನೀಡಿ ಕ್ರಮಕೈಗೊಳ್ಳಲಿ’ ಎಂದು ಅವರು ಒತ್ತಾಯಿಸಿದರು. 

ನಗರಸಭೆ ಸದಸ್ಯರದ್ದು ಎಂದು ಹೇಳಲಾಗುವ ಹಂದಿ ಸಾಕಣೆ ಕೇಂದ್ರವಿದೆ. ಅದರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಬಂದರೆ ಆ ಸದಸ್ಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸುಮ್ಮನಿರುವಂತೆ ಮಾಡುತ್ತಾರೆ
ಹೆಸರು ಹೇಳಲಿಚ್ಛಿಸದ ನಗರಸಭೆ ಅಧಿಕಾರಿ

ಗಮನಕ್ಕೆ ಬಂದರೂ ಕ್ರಮವಿಲ್ಲ

‘ಜನನಿಭಿಡ ಪ್ರದೇಶದಲ್ಲಿ ಹಂದಿ ಸಾಕಣೆಗೆ ಅವಕಾಶವಿಲ್ಲ. ಆದರೂ ಹಲವು ವರ್ಷಗಳಿಂದ ನಗರದಲ್ಲಿ ಹಂದಿ ಸಾಕಣೆ ಮುಂದುವರಿದಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ತಂದರೂ ಯಾವುದೇ ಕ್ರಮವಾಗಿಲ್ಲ. ಹಂದಿ ಸಾಕಣೆಯಲ್ಲಿ ತೊಡಗಿಕೊಂಡವರು ರಾಜಕೀಯ ಪ್ರಭಾವವನ್ನೂ ಹೊಂದಿರುವ ಕಾರಣಕ್ಕೆ ಅಧಿಕಾರಿಗಳು ಕ್ರಮಕ್ಕೆ ಹಿಂಜರಿಯುತ್ತಿರುವ ಶಂಕೆ ಇದೆ’ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.