ADVERTISEMENT

ಭಟ್ಕಳ: ಹಾಡುವಳ್ಳಿಯಲ್ಲಿ ನಾಲ್ಕು ಜನರ ಕೊಲೆ- ಇಬ್ಬರ ಬಂಧನ

ಭೀಕರ ಹತ್ಯೆಗೆ ಸಾಕ್ಷಿಯಾದ ಹಾಡುವಳ್ಳಿಯಲ್ಲೀಗ ನೀರವ ಮೌನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 14:54 IST
Last Updated 25 ಫೆಬ್ರುವರಿ 2023, 14:54 IST
ಶಂಭು ಭಟ್
ಶಂಭು ಭಟ್   

ಭಟ್ಕಳ: ಹಾಡುವಳ್ಳಿಯಲ್ಲಿ ಶುಕ್ರವಾರ ನಡೆದ ನಾಲ್ಕು ಜನರ ಬರ್ಬರ ಕೊಲೆ ಪ್ರಕರಣವು ತಾಲ್ಲೂಕಿನ ಜನತೆಯನ್ನು ಬೆಚ್ಚಿ ಬೀಳಿಸಿದೆ. ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದು, ಕೊಲೆಯಾದ ಶಂಭು ಭಟ್ಟ ಅವರ ಹಿರಿಯ ಸೊಸೆ ವಿದ್ಯಾ ಶ್ರೀಧರ ಭಟ್ಟ ಹಾಗೂ ಆಕೆಯ ತಂದೆ, ಹಲ್ಯಾಣಿ ನಿವಾಸಿ ಶ್ರೀಧರ ಜನಾರ್ಧನ ಭಟ್ಟ ಎನ್ನುವವರನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಗಾರ ಎಂದು ಸಂಶಯಿಸಲಾಗಿದ್ದ ವಿನಯ ಶ್ರೀಧರ ಭಟ್ಟನ ಶೋಧ ಕಾರ್ಯಕ್ಕೆ ಮೂರು ತಂಡ ರಚಿಸಲಾಗಿದೆ.

ಕೆರೆ ಜಾಗಕ್ಕಾಗಿ ಕೊಲೆ?

ADVERTISEMENT

‘ಶಂಭು ಭಟ್ಟರ ಹಿರಿಯ ಪುತ್ರ ಶ್ರೀಧರ ಭಟ್ಟ ಆರು ತಿಂಗಳ ಹಿಂದೆ ಮೃತಪಟ್ಟಿದ್ದರು. ಮಗ ತೀರಿದ ಬಳಿಕ ಸೊಸೆ ಇಲ್ಲಿಯೇ ಇದ್ದರು. ಆಕೆಯ ಸಹೋದರ ವಿನಯ ಆಗಾಗ ಹಾಡುವಳ್ಳಿಗೆ ಬಂದು ಆಸ್ತಿಯಲ್ಲಿ ಪಾಲು ಕೊಡುವಂತೆ ಜಗಳ ತೆಗೆಯುತ್ತಿದ್ದ. ಇದರಿಂದ ನೊಂದಿದ್ದ ಶಂಭು ಭಟ್ಟರು, ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳಿಗೆ ಹಾಗೂ ತಮ್ಮ ನಡುವೆ ಆಸ್ತಿ ಭಾಗ ಮಾಡಿ ನೀಡಿದ್ದರು. ತಮಗೆ ಕೊಟ್ಟ ಪಾಲಿನಲ್ಲಿ ಕೆರೆ ಇಲ್ಲ ಎನ್ನುವ ತಕರಾರಿನೊಂದಿಗೆ ಜಗಳ ನಡೆಯುತ್ತಿತ್ತು’ ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿವೆ.

ಅಜ್ಜ, ಅಜ್ಜಿ, ತಂದೆ-ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳು, ಅನಾಥರಾಗಿದ್ದಾರೆ. ರಾಘು ಭಟ್ಟ ಅವರ 6 ವರ್ಷದ ಮಗಳು ಹಾಗೂ 3 ವರ್ಷದ ಮಗನ ಕಂಬನಿ ಕಂಡು ಊರಿಗೆ ಊರೇ ಮರುಗುತ್ತಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ ಹಾಗೂ ಡಿವೈಎಸ್ಪಿ ಶ್ರೀಕಾಂತ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಶ್ವಾನ ದಳ, ಬೆರಳಚ್ಚುಗಾರರು ಪರಿಶೀಲಿಸಿದರು.

ಹಾಡುವಳ್ಳಿಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿ ವಿಚಾರವೂ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.

-ಎನ್.ವಿಷ್ಣುವರ್ಧನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.